ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

ರಕ್ಷಣೆಗೆ ಹೋದ ಮೂವರ ದಾರುಣ ಸಾವು
ಮಂಡ್ಯ: ಜೂ.13- ಅಪಘಾತಕ್ಕೀಡಾದವರನ್ನು ರಕ್ಷಿಸಲು ಹೋದ ಮೂವರಿಗೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಣಿಗೆರೆ ಬಳಿ ನಡೆದಿದೆ.
ಮಣಿಗೆರೆ ಗ್ರಾಮದ ದೇವರಾಜು (31), ಬಿದರಹೊಸಹಳ್ಳಿ ಗ್ರಾಮದ ಪ್ರಸನ್ನ (45) ಮತ್ತು ಪ್ರದೀಪ್ (25) ಮೃತ ದುರ್ದೈವಿಗಳು. ಮೃತರ ಪೈಕಿ ಪ್ರಸನ್ನ ಚಾಂಶುಗರ್ ಕಾರ್ಖಾನೆ ನೌಕರರಾಗಿದ್ದರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚೀರಾಡುತ್ತಿರುವುದನ್ನು ಕೇಳಿಸಿಕೊಂಡ ಮೂವರು ಕಾರಿನ ಬಳಿ ಹೋಗಿದ್ದಾರೆ. ಆದರೆ ದುರಾದೃಷ್ಟವಶಾತ್ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ಅದನ್ನು ತುಳಿದು ಮೃತಪಟ್ಟಿದ್ದಾರೆ.
ಕಾರು ಮಳವಳ್ಳಿಯಿಂದ ಕೆಎಂ ದೊಡ್ಡಿ ಕಡೆಗೆ ಹೋಗುತ್ತಿತ್ತು. ಮಣಿಗೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ವಿದ್ಯುತ್ ಕಂಬಕ್ಕೆ ಕಾರಿನಲ್ಲಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದಿತ್ತು. ಆದರೆ ಕತ್ತಲಲ್ಲಿ ರಕ್ಷಣೆಗೆ ಧಾವಿಸಿದವರಿಗೆ ವಿದ್ಯುತ್ ತಂತಿ ಕಾಣಲೇ ಇಲ್ಲ. ಹೀಗಾಗಿ ಗಾಯಗೊಂಡಿದ್ದವರನ್ನು ರಕ್ಷಿಸಲು ಹೋದ ಮೂವರು ವಿದ್ಯುತ್ ಸ್ಪರ್ಶವಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕೂಡಲೇ ಅಲ್ಲಿಯೇ ಇದ್ದ ಸ್ಥಳೀಯರು ಸೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಅಷ್ಟೊತ್ತಿಗೆ ಮೂವರು ಮೃತಪಟ್ಟಿದ್ದರು. ಬಳಿಕ ಭಯದ ನಡುವೆಯೂ ಕಾರಿನಲ್ಲಿದ್ದವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮೃತರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.
ಈ ಪ್ರಕರಣ ಮದ್ದೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುತ್ತದೆ.

Leave a Comment