ವಿದ್ಯಾ ವಿಕಾಸದಲ್ಲಿ ಖಾಸಗಿ ಸಹಭಾಗಿತ್ವ ದೊಡ್ಡದು: ಮಠಪತಿ

ಧಾರವಾಡ, ಫೆ.11- ತುಮಕೂರಿನ ಸಿದ್ಧಗಂಗಾಮಠ, ಧಾರವಾಡದ ಮುರುಘಾಮಠ, ಬೆಳಗಾವಿಯ ಕೆ.ಎಲ್.ಇ. ಸಂಸ್ಥೆ ಸೇರಿದಂತೆ ನಾಡಿನ ಹಲವಾರು ಮಠ-ಮಂದಿರ ಮತ್ತು ಸಂಘ-ಸಂಸ್ಥೆಗಳು ಶಿಕ್ಷಣ ಸಂವರ್ಧನೆಗೆ ನಿರಂತರ ಶ್ರಮಿಸಿವೆ. ಸ್ವಾತಂತ್ರ್ಯಪೂರ್ವ ಕಾಲಘಟ್ಟದಿಂದ ಇಲ್ಲಿಯವರೆಗೆ ವಿದ್ಯಾ ವಿಕಾಸದಲ್ಲಿ ಖಾಸಗಿ ಸಹಭಾಗಿತ್ವ ಬಹಳ ದೊಡ್ಡದಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಸಾಹಿತಿ ರಾಜಶೇಖರ ಮಠಪತಿ (ರಾಗಂ) ಪ್ರತಿಪಾದಿಸಿದರು.
ಅವರು ಇಲ್ಲಿಗೆ ಸಮೀಪದ ನುಗ್ಗಿಕೇರಿ ಬಳಿ ಪಾಂಡುನಗರದ ಸ್ನೇಹಿತರ ಶಿಕ್ಷಣ ಸಂಸ್ಥೆಯ ಸ್ಫೂರ್ತಿ ವಿದ್ಯಾಲಯದ 9ನೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಹಳ್ಳಿಗಾಡಿನಲ್ಲಿ ಪ್ರೌಢ ಶಾಲೆಗಳನ್ನು, ಪದವಿ-ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ತೆರೆದದ್ದರಿಂದಲೇ ಅನೇಕ ಬಡ ವಿದ್ಯಾರ್ಥಿಗಳ ಅಕ್ಷರ ಕಲಿಕೆಯ ಕನಸು ನನಸಾಗಿದೆ. ರಾಜ್ಯದ ಅನೇಕ ಮಹನೀಯರು ವಿದ್ಯಾ ವಿಕಾಸಕ್ಕಾಗಿ ತಮ್ಮ ಬದುಕನ್ನು ಗಂಧದ ಕೊರಡಿನಂತೆ ಸವೆಸಿದ್ದಾರೆ ಎಂದರು.
ಜನಭಾಷಾ ಮಾಧ್ಯಮ : ಪ್ರಾಥಮಿಕ ಶಿಕ್ಷಣವು ಸಂಪೂರ್ಣ ಆಯಾ ರಾಜ್ಯಗಳ ಪ್ರಾದೇಶಿಕ ಜನಭಾಷಾ ಮಾಧ್ಯಮದಲ್ಲಿಯೇ ಲಭಿಸುವಂತೆ, ಜೊತೆಗೆ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳಿಗೆ ಅತಿ ಹೆಚ್ಚಿನ ಸೌಲಭ್ಯಗಳನ್ನು ಹಾಗೂ ವೇತಾನುದಾನವನ್ನು ಸುಲಭವಾಗಿ ನೀಡುವಂತೆ ಸರಕಾರ ಕ್ರಮವಹಿಸಬೇಕು. ಇದರಲ್ಲಿ ನಾವು ತಾಳುವ ಉದಾಸೀನತೆ ಮುಂದೊಂದು ದಿನ ಅಪ್ಪಟ ಕನ್ನಡಿಗರಿಗೇ ಕನ್ನಡ ಭಾಷೆ, ಅದರ ಲಿಪಿ, ಚರಿತ್ರೆ, ಘನತೆ ಅರಿವಿಗೆ ಬಾರದೇ ಕನ್ನಡನಾಡು ಹಿನ್ನೆಡೆಯನ್ನು ಅನುಭವಿಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದರು.
ಸ್ನೇಹಿತರ ಶಿಕ್ಷಣ ಸಂಸ್ಥೆಯು ಕನ್ನಡ ಮಾಧ್ಯಮದ ಶಾಲೆಯನ್ನು ನಡೆಸುತ್ತಿದ್ದು, ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಪ್ರಯತ್ನಗಳನ್ನು ಮುಂದುವರೆಸಿದೆ. ಸಾರ್ವಜನಿಕರು ಇಂತಹ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸಬೇಕು ಎಂದೂ ರಾಗಂ ಮನವಿ ಮಾಡಿದರು.
ಸ್ನೇಹಿತರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಜಿ. ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಪ್ರೇಮಿ ನಿಂಗಪ್ಪ ಕುಡುವಕ್ಕಲಿಗೇರ ಹಾಗೂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಆರ್.ಎಸ್.ಬಡಿಗೇರ ಇದ್ದರು. ಮೀನಾಕ್ಷಿ ಸಾಂಬ್ರಾಣಿ ಸ್ವಾಗತಿಸಿದರು. ಶಮಶಾದ್ ನಜೀಮುಲ್ಲಾ ಹಾಗೂ ಶಶಿಕಲಾ ಹಿರೇಮಠ ನಿರೂಪಿಸಿದರು. ಮಾರ್ತಾ ಗುಂಡಮಿ ವಂದಿಸಿದರು.
ಶಾಲೆಯ ಮೇಘನಾ ಕಲಘಟಗಿ, ಅನೂಷಾ ಚಿತ್ರಗಾರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ವಾರ್ಷಿಕೋತ್ಸವದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಸ್ತುತ ಪಡಿಸಿದರು.

Leave a Comment