ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಜ.11:- ಯುಜಿಸಿ ಮತ್ತು ಕೇಂದ್ರ ಎಂ ಹೆಚ್ ಆರ್ ಡಿ ಇಲಾಖೆಯ ದಲಿತ ಮತ್ತು ಅಲ್ಪ ಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಇಂದು ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವು ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವುದು ಆತಂಕದ ಸಂಗತಿ. ಅದರ ಮುಂದುವರಿದ ಭಾಗವಾಗಿ ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡಬೇಕೆಂಬ ನೆಪವೊಡ್ಡಿ ಕೇಂದ್ರ ಎಂಹೆಚ್ ಆರ್ ಡಿ ಇಲಾಖೆಯು ಯುಜಿಸಿ ನಿಯಮಗಳನ್ನು ಬದಲಿಸುತ್ತಿದೆ. ಇವರು ತರಲು ಉದ್ದೇಶಿಸಿರುವ ಹೊಸ ನಿಯಮಗಳ ಪ್ರಕಾರ ಪ.ಜಾತಿ/ಪ.ಪಂಗ ಮತ್ತು ಅಲ್ಪಸಂಖ್ಯಾತ ವರ್ಗಗಳ ವಿದ್ಯಾರ್ಥಿಗಳ ರಾಷ್ಟ್ರೀಯ ಶಿಷ್ಯವೇತನಗಳಾದ ಮೌಲಾನಾ ಆಜಾದ್, ರಾಷ್ಟ್ರೀಯ ಶಿಷ್ಯವೇತನ, ರಾಷ್ಟ್ರೀಯ ಶಿಷ್ಯವೇತನ ಎಸ್ ಸಿ/ಎಸ್ ಟಿ ಶಿಷ್ಯವೇತನಗಳಿಗೆ ಸಂಶೋಧನಾ ವಿದ್ಯಾರ್ಥಿಗಳು ಅರ್ಜಿ ಹಾಕಬೇಕಾದರೆ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಅರ್ಜಿ ಹಾಕಬೇಕೆಂಬ ವಿದ್ಯಾರ್ಥಿ ವಿರೋಧಿ ನಿಯಮವನ್ನು ರೂಪಿಸಿದೆ. ಇದು ಸಂಪೂರ್ಣ ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಈ ನಿಯಮವನ್ನು ಕೂಡಲೇ ರದ್ದುಪಡಿಸಿ ಈ ಹಿಂದೆ ಇದ್ದ ರೀತಿಯಲ್ಲೇ ಸಂಶೋಧನೆ ನೋಂದಣಿ ಮಾಡಿಕೊಂಡ ಎಲ್ಲ ಸಂಶೋಧನಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.
ಹಲವು ತಿಂಗಳುಗಳಿಂದ ತಡೆಹಿಡಿದಿರುವ ಆರ್ ಜಿಎನ್ ಎಫ್/ಎಂಎಎನ್ ಎಫ್ ಶಿಷ್ಯವೇತನವನ್ನು ಕೂಡಲೇ ಬಿಡುಗಡೆ ಮಾಡಿ. ಇನ್ನು ಮುಂದೆ ಪ್ರತಿತಿಂಗಳು ಸರಿಯಾಗಿ ಶಿಷ್ಯವೇತನಗಳನ್ನು ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಿ ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿ.ಮಹದೇವಸ್ವಾಮಿ ಮಂಗಲ, ಗೋಪಾಲ್ ಎಸ್, ಮಹೇಶ್ ಸೋಸ್ಲೆ, ನಾಗೇಂದ್ರ, ರಘು ಬಿಎಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Comment