ವಿದ್ಯಾರ್ಥಿ ಅಪಹರಣ ಯತ್ನ ಆರೋಪಿಗಳಿಗೆ ಶೋಧ

ಕುಂದಾಪುರ, ನ.೧೯- ಬೆಳ್ವೆಯ ಸರಕಾರಿ ಶಾಲೆಯ ೫ ನೇ ತರಗತಿ ವಿದ್ಯಾರ್ಥಿ ಹರ್ಷಿತ್ ಶಾಲೆಗೆ ತೆರಳುತ್ತಿದ್ದ ವೇಳೆ ಒಮ್ನಿಯಲ್ಲಿ ಬಂದ ದುಷ್ಕರ್ಮಿಗಳು ರಾಸಾಯನಿಕ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿ ಅಪಹರಣ ಯತ್ನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಕುರಿತು ಯಾವುದೇ ಸುಳಿವು ದೊರೆತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರು ನಿನ್ನೆ ಸೋಮವಾರ ವಿದ್ಯಾರ್ಥಿಯನ್ನು ಶಾಲೆಯಲ್ಲಿ ಭೇಟಿಯಾಗಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಪ್ರಕರಣದ ತನಿಖೆಗೆಂದು ಗೋಳಿಯಂಗಡಿ ಸರ್ಕಲ್‌ನಲ್ಲಿದ್ದ ಸಿಸಿಟಿವಿ ಫುಟೇಜ್ ಪರಿಶೀಲಿಸಿದ್ದು ಕೆಮರಾ ಕೆಟ್ಟಿರುವುದು ಗಮನಕ್ಕೆ ಬಂದಿದೆ.

ಬೆಳ್ವೆ ಹಾಗೂ ಗೋಳಿಯಂಗಡಿ ಪರಿಸರದಲ್ಲಿ ನಡೆದ ಹಲವಾರು ಅಪರಾಧ ಪ್ರಕರಣದಲ್ಲಿ ಆರೋಪಿ ಪತ್ತೆಯಾಗದ ಕಾರಣ ಪೊಲೀಸ್ ಇಲಾಖೆ ಗೋಳಿಯಂಗಡಿ ಸರ್ಕಲ್ ಬಳಿ ಸಿಸಿ ಕೆಮರಾ ಅಳವಡಿಸಿತ್ತು. ಆದರೆ ಕೆಮರಾ ಕಾರ್ಯನಿರ್ವಹಿಸದೆ ಇರುವುದು ಇದುವರೆಗೂ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿರದೆ ಈ ತನಿಖೆಯ ವೇಳೆ ತಿಳಿದುಬಂದಿದೆ. ತನಿಖೆಗೆ ೨ ತಂಡ ರಚಿಸಿದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment