ವಿದ್ಯಾರ್ಥಿಯ ಅಪಹರಿಸಿ ದರೋಡೆ

ಮಂಗಳೂರು, ಡಿ.೭- ಕಾಲೇಜ್ ವಿದ್ಯಾರ್ಥಿಯೋರ್ವನನ್ನು ಐವರು ದುಷ್ಕರ್ಮಿಗಳ ತಂಡ ಅಪಹರಿಸಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಣ ದರೋಡೆ ನಡೆಸಿದ ಘಟನೆ ನಡೆದಿದೆ. ನಗರದ ಫಳ್ನೀರ್ ನಿವಾಸಿ ಶಿಮಾಕ್ ಹಸನ್(೨೨) ಮಾರಣಾಂತಿಕ ಹಲ್ಲೆಗೊಳಗಾದ ವಿದ್ಯಾರ್ಥಿ. ಗೌತಮ್, ಲಾಯ್‌ವೆಗರ್, ಅಂಕಿತ್, ಆದಿತ್ಯ ವಾಲ್ಕೆ ಹಲ್ಲೆನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ಶಿಮಾಕ್ ನಗರದ ಕಾಲೇಜ್‌ನಲ್ಲಿ ಬಿಬಿಎಂ ವಿದ್ಯಾಭ್ಯಾಸ ಮಾಡುತ್ತಿದ್ದು, ನಿನ್ನೆ ಸಂಜೆ ೫ ಗಂಟೆಗೆ ನಗರದ ಅತ್ತಾವರ ಸ್ನಾಕೀಸ್ ಎಂಬ ಮಳಿಗೆಯೊಂದರಲ್ಲಿ ಶಿಮಾಕ್ ಹಾಗೂ ಅವರ ಸ್ನೇಹಿತರಾದ ನೌಶಾದ್, ಸೌರವ್ ಕಾಫಿ ಕುಡಿಯುತ್ತಾ ಕುಳಿತ್ತಿದ್ದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಶಿಮಾಕ್‌ನ ಕ್ಲಾಸ್‌ಮೇಟ್ ಅಂಕಿತ್, ಸ್ವಲ್ಪ ಕೆಲಸವಿದೆ ಬಾ ಎಂದು ಶಿಮಾಕ್‌ನನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ.

ಅರ್ಧ ಗಂಟೆಯಾದರೂ ಶಿಮಾಕ್ ವಾಪಸಾಗದ ಕಾರಣ ಅವರ ಸ್ನೇಹಿತರು ಮೊಬೈಲ್ ಸಂಪರ್ಕಿಸಿದ್ದಾರೆ. ಮೊದಲು ಕರೆಯನ್ನು ಸ್ವೀಕರಿಸಿಲ್ಲ, ಬಳಿಕ ಮತ್ತೊಂದು ಮೊಬೈಲ್‌ನಿಂದ ಪ್ರಯತ್ನಿಸಿದಾಗ ದುಷ್ಕರ್ಮಿಗಳು ಕರೆ ಸ್ವೀಕರಿಸಿ, ‘ಶಿಮಾಕ್‌ನನ್ನು ಮೂಡಬಿದ್ರೆಗೆ ಕರೆದೊಯ್ಯುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಆನಂತರ ರಾತ್ರಿ ವೇಳೆ ದುಷ್ಕರ್ಮಿಗಳು ಕರೆ ಮಾಡಿ, ‘ನಮಗೆ ೫೦ ಸಾವಿರ ರೂ. ಕೊಡಬೇಕು. ಇಲ್ಲದಿದ್ದರೆ ಶಿಮಾಕ್‌ನನ್ನು ಬಿಡುವುದಿಲ್ಲ’ ಎಂದು ಹೇಳಿದ್ದಾರೆ. ಮತ್ತೆ ಕೆಲವು ಗಂಟೆಗಳ ಬಳಿಕ ಕರೆ ಮಾಡಿ ಆತನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ. ಕುಟುಂಬಸ್ಥರು ೨೦ ಸಾವಿರ ರೂ. ಕೊಡಲು ಒಪ್ಪಿದ್ದಾರೆ. ನಗರದ ಕೆಪಿಟಿ ಬಳಿ ದುಷ್ಕರ್ಮಿಗಳಿಗೆ ಹಣ ತಲುಪಿಸಿದ ತಕ್ಷಣ, ಶಿಮಾಕ್‌ನನ್ನು ಸ್ವಿಫ್ಟ್ ಕಾರಿನಿಂದ ತಳ್ಳಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

 

Leave a Comment