ವಿದ್ಯಾರ್ಥಿಗಳ ಮೇಲೆ ಹಲ್ಲೆ  ಸಚಿವ ಶಾ ರಾಜೀನಾಮೆಗೆ ಆಗ್ರಹ

ನವದೆಹಲಿ, ಜ. ೬- ಜವಾಹರಲಾಲ್ ನೆಹರು, ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆ ಮತ್ತು ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಪಕ್ಷ, ಗೃಹ ಸಚಿವ ಅಮಿತ್ ಷಾ ಅವರ ರಾಜೀನಾಮೆಗೆ ಒತ್ತಾಯಿಸಿದೆ.

ದೆಹಲಿ ಪೊಲೀಸರು ಮತ್ತು ಗೃಹ ಸಚಿವ ಅಮಿತ್ ಷಾ ಅವರ ಬೆಂಬಲ ಸಹಕಾರವಿಲ್ಲದೆ ಗುಂಡಾಗಳು, ವಿಶ್ವ ವಿದ್ಯಾಲಯಕ್ಕೆ ನುಗ್ಗಿ ದಾಂಧಲೆ ನಡೆಸಿ, ಹಿಂಸಾಚಾರ ನಡೆಸಲು ಅವಕಾಶವಿಲ್ಲ. ಹೀಗಾಗಿ ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕ ಗಾಂಧಿ, ಕೆ.ಸಿ.ವೇಣುಗೋಪಾಲ್ ಮತ್ತಿತರರು ವಿಶ್ವ ವಿದ್ಯಾನಿಲಯದ ಅವರಣದಲ್ಲಿ ನಿನ್ನೆ ನಡೆದ ಘಟನೆ ಖಂಡನಾರ್ಹ ಫ್ಯಾಸಿಸ್ಟ್ ಶಕ್ತಿಗಳು ದೇಶವನ್ನು ನಿಯಂತ್ರಿಸುವುದಕ್ಕೆ ಇದೊಂದು ಸ್ಪಷ್ಟ ನಿರ್ದಶನ ವೆಂದು ವಾಗ್ದಾಳಿ ನಡೆಸಿದ್ದಾರೆ.

ವಿಶ್ವ ವಿದ್ಯಾಲಯದ ಆವರಣಕ್ಕೆ ಗುಂಡಾಗಳನ್ನು ಒಳಗೆ ಬಿಟ್ಟುಕೊಂಡು ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಪ್ರಚೋದನೆ ನೀಡುತ್ತಿದೆ. ಇಂತಹ ಹಿಂಸೆಯನ್ನು ತಮ್ಮ ಮಕ್ಕಳ ಮೇಲೆ ಪ್ರಚೋದಿಸಲಿದ್ದಾರೆಯೇ ವಿಶ್ವ ವಿದ್ಯಾನಿಲಯದಲ್ಲಿ ಹಲ್ಲೆ ಖಂಡನೀಯ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ವಿಶ್ವ ವಿದ್ಯಾನಿಲಯದ ಆವರಣಕ್ಕೆ ಗುಂಡಾಗಳು ನುಗ್ಗಿ ವಿದ್ಯಾರ್ಥಿಗಳನ್ನು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರೂ ವಿಶ್ವ ವಿದ್ಯಾನಿಲಯದ ಕುಲಪತಿಗಳು ಮಾಧ್ಯಮಗಳಿಗೆ ಮಾಹಿತಿ ನೀಡದೆ ಮರೆಮಾಚಿದ್ದಾರೆ. ಪರೋಕ್ಷವಾಗಿ ಬಿಜೆಪಿ ನಾಯಕರೆ ಇಂತಹ ಹಿಂಸಾಚಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷರು ಆಗಿರುವ ಗೃಹ ಸಚಿವ ಅಮಿತ್ ಶಾ ಅವರ ಗುಂಡಾಗಳಿಂದ ಈ ರೀತಿಯ ಹಿಂಸಾಚಾರ ವಿದ್ಯಾರ್ಥಿಗಳ ಮೇಲೆ ನಡೆದಿದೆ ಇದು ತೀವ್ರ ಖಂಡನಾರ್ಹ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ನ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯೆ ನೀಡಿ ಜಾಮೀಯಾ ಇಸ್ಲಾಮೀಯಾ ಹಾಗೂ ಆಲೀಗರ್ ಮುಸ್ಲಿಂ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ದಾಳಿ, ದಾಂಧಲೆ ನಡೆಸಿದ ಬಳಿಕ ಇದೀಗ ಜೆಎನ್‌ಯು ವಿಶ್ವ ವಿದ್ಯಾನಿಲಯದ ಮೇಲೆ ಗೂಂಡಾಗಳು ದಾಳಿ ಮಾಡುವ ಮೂಲಕ ವಿಶ್ವ ವಿದ್ಯಾಲಯದಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ದೆಹಲಿ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ಪ್ರಕರಣಕ್ಕೆ ಬಿಜೆಪಿ ನೇರ ಬೆಂಬಲ ನೀಡಿದೆ ಎಂದು ದೂರಿದ್ದಾರೆ.

Leave a Comment