ವಿದ್ಯಾರ್ಥಿಗಳಿಗೆ ದ್ವಂದ್ವ ಮನಸ್ಸು ಬೇಡ

ದಾವಣಗೆರೆ, ಆ. 28 – ವಿದ್ಯಾರ್ಥಿಗಳು ಅನಗತ್ಯ ವಿಚಾರಗಳ ಬಗ್ಗೆ ಚರ್ಚೆಗಳನ್ನು ಬಿಟ್ಟು ಆರೋಗ್ಯಪೂರ್ಣ ವಿಷಯಗಳತ್ತ ಗಮನವಹಿಸಬೇಕು ಎಂದು ಬಾಪೂಜಿ ಆಸ್ಪತ್ರೆ ಮನೋರೋಗ ತಜ್ಞ ಡಾ.ಹರೀಶ್ ಕುಲಕರ್ಣಿ ಎಂದು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿಂದು ಸ್ನಾತಕೋತ್ತರ ಕೇಂದ್ರ, ಯುವ ರೆಡ್‍ಕ್ರಾಸ್ ಘಟಕ ಮತ್ತು ವಿದ್ಯಾರ್ಥಿ ಆಪ್ತ ಸಲಹಾ ಕೋಶ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಏಕಾಗ್ರತೆ, ಸ್ಮರಣಶಕ್ತಿ ಅತ್ಯವಶ್ಯ. ಆದರೆ, ವಿದ್ಯಾರ್ಥಿಗಳ ಮಲ್ಟಿವರ್ಕ್ ಗಳ ಮೇಲೆ ಮನಸ್ಸನ್ನು ಹರಿಬಿಡುವುದರಿಂದ ಚಂಚಲತೆ ಹೆಚ್ಚಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಏಕಕಾಲದಲ್ಲಿ ಹಲವಾರು ವಿಷಯಗಳತ್ತ ಗಮನಹರಿಸದೇ ಒಂದುಬಾರಿಗೆ ಒಂದೇ ಕಾರ್ಯ, ವಿಷಯದತ್ತ ಗಮನಹರಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.ಹದಿಹರೆಯದ ವಯಸ್ಸಿನ ವಿದ್ಯಾರ್ಥಿಗಳು ಹಗಲುಗನಸು ಕಾಣುವಿಕೆ, ಬೇಡವಾದ ವಿಚಾರಗಳ ಬಗೆಗಿನ ಆಲೋಚನೆ, ಬಾಹ್ಯವಾಗಿ ಕಾಣುವ, ಕೇಳಿಸುವ ಪ್ರಚೋದನಾ ಸಂಗತಿಗಳ ಮೇಲೆ ಗಮನ ಹರಿಸುವುದರಿಂದ ಮಾನಸಿಕ ದ್ವಂದ್ವ ಹಾಗೂ ದೈಹಿಕ ಆಯಾಸಗೊಳ್ಳುವಿಕೆ ಉಂಟಾಗಿ ಮನಸ್ಸಿನ ಏಕಾಗ್ರತೆ ಮೇಲೆ ಕ್ರಮೇಣ ಹತೋಟಿ ತಪ್ಪುತ್ತದೆ. ಪದವಿ ಹಂತದ ಶಿಕ್ಷಣ ನಮ್ಮ ಜೀವನದ ಅತೀಮುಖ್ಯ ಘಟ್ಟ. ಇದುವೇ ನಿಮ್ಮ ಜೀವನದ ಗುರಿಯನ್ನು ಸ್ಪಷ್ಟಪಡಿಸುವ ಗಳಿಗೆಯಾದ್ದರಿಂದ ಮನಸ್ಸಿನ ಹತೋಟಿ ಕಾಪಾಡಿಕೊಂಡು ಕೇವಲ ವಿದ್ಯಾಭ್ಯಾಸದತ್ತ ಆಸಕ್ತಿ ವಹಿಸಿ, ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಶಂಕರ್ ಆರ್. ಶೀಲಿ ಮಾತನಾಡಿ, ಸಮಾಜ ಬದಲಾದಂತೆ ನಾವುಗಳು ವಿಕಸನವಾಗುತ್ತಿರಬೇಕು. ಪ್ರತಿಯೊಬ್ಬರಿಗೂ ಬಾಹ್ಯ ವ್ಯಕ್ತಿತ್ವ ಹಾಗೂ ಆಂತರಿಕವೆಂಬ ಎರಡು ಬಗೆಯ ವ್ಯಕ್ತಿತ್ವವಿರುತ್ತದೆ. ನಮ್ಮ ದೇಹ, ಮಾತನಾಡುವಿಕೆ, ಕಾರ್ಯಗಳು ಬಾಹ್ಯವಾಗಿದ್ದರೂ ಇವು ನಮ್ಮ ಆಂತರಿಕ ವ್ಯಕ್ತಿತ್ವವನ್ನು ಹಿಮ್ಮಡಿಗೊಳಿಸುವ, ವಿಕಸನಗೊಳಿಸುವ ಕಾರ್ಯ ಮಾಡುತ್ತವೆ. ಅದೇರೀತಿ, ಯಾರು ಆಂತರಿಕವಾಗಿ ಉತ್ತಮ ಮನೋಭಾವನೆ, ಆಲೋಚನೆ ಹೊಂದಿ ನಡೆದುಕೊಳ್ಳುತ್ತಾರೋ ಅವರು ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಂತರಿಕ ಹಾಗೂ ಬಾಹ್ಯ ವಿಕಸನ ಎರಡಕ್ಕೂ ಆದ್ಯತೆ ನೀಡಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಭಜಂತ್ರಿ ಎಸ್.ಆರ್, ಪ್ರೊ.ವೀರೇಶ್, ರೆಡ್ ಕ್ರಾಸ್ ಸಂಚಾಲಕ ಸಿ.ಎಸ್.ಡಾ.ಸೋಮಶೇಖರಪ್ಪ, ಎಸ್.ಎಂ.ಲತಾ, ಎಸ್.ಎಂ.ಗೌರಮ್ಮ ಸೇರಿದಂತೆ ಮತ್ತಿತರರಿದ್ದರು.

Leave a Comment