ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗೆ ಕೊಕ್

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಜೂ.೧೩- ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಗೆ ಸಮ್ಮಿಶ್ರ ಸರ್ಕಾರ ಮುಂದುವರೆಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯದ ಭಾಗ್ಯ ದೊರಕುವುದು ಮರಿಚೀಕೆಯಾಗಿದೆ.

ಸಿದ್ದರಾಮಯ್ಯ ಅವರ ಸರ್ಕಾರ ಅಂತಿಮ ಬಜೆಟ್ ನಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಕಲ್ಪಿಸಿದರು.

ಆದರೆ ಈ ಉಚಿತ ಬಸ್ ಪಾಸ್ ಸೌಲಭ್ಯದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಪರೋಕ್ಷವಾಗಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಗೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿ ಸಮ್ಮತಿ ನೀ‌ಡಿರಲಿಲ್ಲ. ಹಾಗಾಗಿ ಈ ಯೋಜನೆಯ ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸುವುದಾಗಿ ಅವರು ತಿಳಿಸಿದರು.

ಈಗಾಗಲೇ ಸಾರಿಗೆ ನಿಗಮಗಳು ತಲಾ 500 ಕೋಟಿಗಳಷ್ಟು ನಷ್ಟವನ್ನು ಅನುಭವಿಸುತ್ತಿವೆ. ಹಾಗಾಗಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರದ ಅನುದಾನ ಬೇಕಾಗಿದೆ. ಒಂದು ವೇಳೆ ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿಗೊಳಿಸಿದ್ದೇ ಆದಲಿ, ಸಾರಿಗೆ ಇಲಾಖೆಗೆ 626 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂದು ಹೇಳಿದರು.

ಶಾಲಾ ಕಾಲೇಜು  ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಮುಂದುವರೆಸುವ ಬಗ್ಗೆ ಚರ್ಚೆ ನಡೆಸಲಾಗುವುದು. ಮುಂದಿನ ಬಜೆಟ್ ನಲ್ಲಿ ಈ ಯೋಜನೆಯನ್ನು ಸೇರಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಸಚಿವ ತಮ್ಮಣ್ಣ ಅವರು ತಿಳಿಸಿದರು.

ಇನ್ನು ಮುಂದೆ ಬಿಎಂಟಿಸಿ ಕೆಎಸ್ಆರ್‌ಟಿಸಿ ಕೌಂಟರ್ ಗಳ ಜತೆಗೆ ಶಾಲಾ ಕಾಲೇಜುಗಳ ಆವರಣದಲ್ಲೂ ಬಸ್ ಪಾಸ್ ಗಳನ್ನು ವಿತರಿಸಲಾಗುವುದು. ಈ ನೂತನ ವ್ಯವಸ್ಥೆ ದೇಶದಲ್ಲೇ ಪ್ರ ಪ್ರಥಮ ವಾಗಿದೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳು ಬಸ್ ಪಾಸ್ ಗಳನ್ನು ಪಡೆಯಲು ಅಲೆಯಬೇಕಿತ್ತು. ಶಾಲಾ ಕಾಲೇಜುಗಳಿಗೆ ಸೇರುವ ಮುನ್ನ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ದಾಖಲಾದಾಗ ಶಿಕ್ಷಣ ಇಲಾಖೆ ವೆಬ್ ಸೈಟ್ ನಲ್ಲಿನ ಸಮಗ್ರ ಮಾಹಿತಿ ಅಪ್ ಲೋಡ್ ಆಗಲಿದೆ. ನಂತರ ಸಾರಿಗೆ ಇಲಾಖೆಯ ವೆಬ್ ಸೈಟ್ ಗೆ ಜೋಡಣೆ ಆಗಲಿದೆ. ಅದನ್ನು ಆಧರಿಸಿ ಬಿಎಂಟಿಸಿ ಪಾಸ್ ಗಳನ್ನು ವಿತರಿಸಲಾಗುವುದೆಂದು ತಿಳಿಸಿದರು.

ಈ ತಿಂಗಳ ಅಂತ್ಯದೊಳಗೆ ಎಲ್ಲಾ ವಿದ್ಯಾರ್ಥಿಗಳಿಗೂ ಬಸ್ ಪಾಸ್ ಗಳನ್ನು ನೀಡಲು ಅಗತ್ಯವಾಗಿ ಬೇಕಾದಷ್ಟು ಪಾಸ್ ಗಳು ಮುದ್ರಣವಾಗಲಿದೆ. ಎಂದು ಹೇಳಿದರು.  ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ 600 ರೂ. ಬಾಲಕರಿಗೆ 800 ರೂ. ಕಾಲೇಜು ವಿದ್ಯಾರ್ಥಿಗಳಿಗೆ 1100 ರೂಗಳನ್ನು ಬಸ್ ಪಾಸ್ ಪಡೆಯಲು ಪಾವತಿಸಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ, 200 ರೂ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕು ಎಂದು ಸಚಿವ ತಮ್ಮಣ್ಣ ಅವರು ಹೇಳಿದರು.

ಖಾಸಗಿ ಬಸ್ ಮಾಲೀಕರು ಬಸ್ ನಿಲ್ದಾಣಗಳಲ್ಲಿ ಸ್ಥಳ ಇಲ್ಲದಿದ್ದಲ್ಲಿ ಬೆಂಗಳೂರು ಹೊರ ಭಾಗದಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ನಗರದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸದ್ ಬಳಕೆ ಮಾಡಿಕೊಳ್ಳುವಲ್ಲಿ ಜನರಲ್ಲಿ ಜಾಗೃತಿ ಉಂಟು ಮಾಡಬೇಕಾಗಿದೆ. ಬಲವಂತವಾಗಿ ಸಾರಿಗೆ ಬಳಸುವಂತೆ ಒತ್ತಡ ಏರಲಾಗುವುದಿಲ್ಲ ಎಂದು ತಿಳಿಸಿದರು.

Leave a Comment