ವಿದೇಶಗಳಲ್ಲಿ ಅಧ್ಯಯನ ಮಾಡಲು ವಾರ್ಷಿಕ 10 ಲಕ್ಷ ವಿದ್ಯಾರ್ಥಿ ವೇತನ.

ತುಮಕೂರು, ಆ. ೧- ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟಗಳಿರುವುದರಿಂದ ಅವರು ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಇದಕ್ಕೆ ಪರಿಹಾರವೆಂಬಂತೆ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಬಯಸುವ ವಿದ್ಯಾರ್ಥಿಗಳಿಗೆ ಅವರವರ ಅರ್ಹತೆಗೆ ಅನುಗುಣವಾಗಿ ವಾರ್ಷಿಕ 10 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ನೀಡಲಾಗುವುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಜಾವಿದ್ ಕೆ. ಕಾರಂಗಿ ಹೇಳಿದರು.

ನಗರದ ಉಪ್ಪಾರಹಳ್ಳಿ ಬಡಾವಣೆಯಲ್ಲಿರುವ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಸರ್ಕಾರದ ಶೈಕ್ಷಣಿಕ ಸೌಲಭ್ಯಗಳ ಕುರಿತ ಜಾಗೃತಿ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಲಭ್ಯವಿರುವ ಎಲ್ಲಾ ವಿದ್ಯಾರ್ಥಿ ವೇತನ ಸೌಲಭ್ಯಗಳನ್ನು ವಿವರಿಸಿ, 1 ರಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಪ್ರಿಮೆಟ್ರಿಕ್ ಸ್ಕಾಲರ್‍ಶಿಪ್ ಪ್ರಥಮ ಪಿ.ಯು.ಸಿ.ಯಿಂದ ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಪೋಸ್ಟ್ ಮೆಟ್ರಿಕ್ ಸ್ಕಾಲರ್‍ಶಿಪ್ ನೀಡಲಾಗುತ್ತಿದೆ. 2017-18ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ. 95 ಕ್ಕಿಂತ ಹೆಚ್ಚು ಅಂಕ ಪಡೆದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 20 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ನರ್ಸಿಂಗ್ ಕೋರ್ಸ್ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಾರ್ಷಿಕ 35 ಸಾವಿರ ರೂ. ಹಾಗೂ ಪಿಹೆಚ್‌ಡಿ ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ 25 ಸಾವಿರ ರೂ.ಗಳಂತೆ ಮೂರು ವರ್ಷಗಳ ಕಾಲ ನೀಡಲಾಗುವುದು. ಗ್ರಾಮೀಣ ಭಾಗದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಿಕ್ಕಾಗಿ ಎಲ್ಲ ಸೌಲಭ್ಯಗಳನ್ನೊಳಗೊಂಡ ವಸತಿ ಶಾಲೆಗಳು ಹಾಗೂ ಭಾರತ ಸರ್ಕಾರ ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲಿಕ್ಕೆ ಉಚಿತ ತರಬೇತಿ ಕಾರ್ಯಕ್ರಮ ನೀಡಲಾಗುತ್ತಿದೆ. ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನೀಡಲು ಅರಿವು ಯೋಜನೆ ತುಂಬಾ ಸಹಕಾರಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಷ್ತಾಕ್ ಅಹಮದ್ ಮಾತನಾಡಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಉಪಯೋಗಿಸಿಕೊಂಡು ಶೈಕ್ಷಣಿಕ ಅಭಿವೃದ್ದಿ ಸಾಧಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಲ್ಯಾನ್ಸಿ ಹೆಚ್.ಪಾಯಸ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಸರ್ಕಾರದ ಇಲಾಖೆಯ ಮುಖ್ಯಸ್ಥರೇ ಇಷ್ಟೊಂದು ವಿಸ್ತಾರವಾಗಿ ವಿವರಿಸುತ್ತಿರುವುದು ಪ್ರಶಂಸನೀಯ ವಿಷಯವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಶೇಕ್ ಮಹಮದ್ ಅನ್ವರ್, ಅತ್ತಿಮಬ್ಬೆ ಸಂಸ್ಥೆಯ ಸುಜಾತ ಸುಮತಿ ಕುಮಾರ್, ಸುಪ್ರಭ ರತ್ನ ಮತ್ತಿತರರು ಉಪಸ್ಥಿತರಿದ್ದರು.

Leave a Comment