ವಿಡೀಸ್ ಪ್ರವಾಸಕ್ಕೆ ಕೊಹ್ಲಿ, ಬುಮ್ರಾಗೆ ವಿಶ್ರಾಂತಿ ಧೋನಿ ನಡೆ ನಿಗೂಢ

ನವದೆಹಲಿ, ಜು ೧೨- ಮುಂಬರುವ ಆಗಸ್ಟ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಯಾರ್ಕರ್ ಮಾಂತ್ರಿಕ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲು ಚಿಂತನೆ ನಡೆಸಲಾಗಿದ್ದು, ಈ ಸರಣಿಯಲ್ಲಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿ ಮುಂದುವರಿಯುವರೇ ಅಥವಾ ರಾಜೀನಾಮೆ ನೀಡಲಿದ್ದಾರೆಯೇ ಎಂಬುದು ಕುತುಹಲ ಮೂಡಿಸಿದೆ.

ವೆಸ್ಟ್ ಇಂಡೀಸ್ ಮೂರು ಟಿ-೨೦, ಮೂರು ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಗಳಿಗೆ ಭಾರತ ತಂಡದ ಆಯ್ಕೆ ಮಾಡಲು ರಾಷ್ಟ್ರೀಯ ಆಯ್ಕೆ ಸಮಿತಿ ಜುಲೈ ೧೭ ಅಥವಾ ೧೮ ರಂದು ಮುಂಬೈನಲ್ಲಿ ಸಭೆ ನಡೆಸಲಿದೆ.

ವಿಶ್ವಕಪ್ ನಿಂದ ಹೊರಗೆ ಬಿದ್ದಿರುವ ಟೀಂ ಇಂಡಿಯಾ ಶೀಘ್ರವೇ ಭಾರತಕ್ಕೆ ವಾಪಸ್ ಬರುತ್ತಿದೆ. ಮೂಲಗಳ ಪ್ರಕಾರ, ಅನೇಕ ದಿನಗಳಿಂದ ವಿಶ್ರಾಂತಿ ಪಡೆಯದೆ ಆಡಿರುವ ನಾಯಕ ಕೊಹ್ಲಿ ಕೂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೋಗುವುದು ಬಹುತೇಕ ಸಂದೇಹವಾಗಿದೆ.

ಕೊಹ್ಲಿ ಟಿ-೨೦ ಹಾಗೂ ಏಕದಿನ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಏಕದಿನ ಪಂದ್ಯ ಹಾಗೂ ಟಿ-೨೦ ಪಂದ್ಯಗಳನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್ ಮತ್ತು ಮೊಹಮ್ಮದ್ ಶಮಿ ಕೂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಕೈಗೊಳ್ಳದೇ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಅವರು ವಿಂಡೀಸ್ ಪ್ರವಾಸ ಕೈಗೊಳ್ಳಲಿದ್ದಾರೆಂದು ನಿರೀಕ್ಷೆ ಮಾಡಲಾಗಿದೆ.

ಇದೀಗ ಎಲ್ಲರ ಚಿತ್ತ ಮಹೇಂದ್ರ ಸಿಂಗ್ ಧೋನಿ ಮೇಲೆ ನೆಟ್ಟಿದೆ. ಕ್ರಿಕೆಟ್ ವೃತ್ತಿ ಜೀವನದ ವಿದಾಯ ನೀಡುವರೇ ಅಥವಾ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-೨೦ ವಿಶ್ವಕಪ್ವರೆಗೂ ತಂಡದಲ್ಲಿ ಮುಂದುವರಿಯಲಿದ್ದಾರೆಯೇ ಎಂದು ಕಾದು ನೋಡಬೇಕಾಗಿದೆ.

Leave a Comment