ವಿಜ್ಞಾನ ನಂಬಿ, ಮೂಡನಂಬಿಕೆಗಳನ್ನಲ್ಲ: ಹೆಚ್.ಕಾಂತರಾಜ್

ತುಮಕೂರು, ಆ. ೧೩- ಯಾವುದೇ ಒಂದು ಜನಾಂಗ ಅಭಿವೃದ್ಧಿ ಹೊಂದಬೇಕಾದರೆ ಆ ಜನಾಂಗದಲ್ಲಿರುವ ಅನೂಚಾನವಾಗಿ ಬಂದಿರುವ ಮೂಢನಂಬಿಕೆಗಳನ್ನು ತೊರೆದು ವಿಜ್ಞಾನವನ್ನು ನಂಬಿದಾಗ ಮಾತ್ರ ಸಾಧ್ಯವೆಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್.ಕಾಂತರಾಜ್ ಗೊಲ್ಲ ಜನಾಂಗಕ್ಕೆ ಕರೆ ನೀಡಿದರು.

ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಗೊಲ್ಲ ಜನಾಂಗದಲ್ಲಿನ ಮೂಢನಂಬಿಕೆಗಳ ನಿರ್ಮೂಲನೆ ಕುರಿತು ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂವಿಧಾನಿಕ ಹಕ್ಕುಗಳನ್ನು ನಾವು ಪಡೆಯಬೇಕು. ಅವುಗಳನ್ನು ಅನುಭವಿಸಬೇಕು. ಇದರಿಂದ ನಾವು ಮುಂದೆ ಬರಲು ಸಾಧ್ಯ ಎಂದ ಅವರು, ರಾಜ್ಯದಲ್ಲಿ 1141 ಗೊಲ್ಲರ ಹಟ್ಟಿಗಳಿದ್ದು, ಇವುಗಳನ್ನು ಸರ್ಕಾರ ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಮೂಲಕ ಈ ಗ್ರಾಮಗಳಿಗೆ ಎಲ್ಲಾ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ ಎಂದರು.

ಕೆಲವು ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ವಿದ್ಯುತ್ ಸಂಪರ್ಕಗಳಿಲ್ಲ. ಕಾರಣ ಆ ಗೊಲ್ಲರಹಟ್ಟಿಗಳ ಜನರು ವಿದ್ಯುತ್ ಸಂಪರ್ಕ ತಂತಿಗಳನ್ನು ತಮ್ಮ ಗ್ರಾಮಗಳಲ್ಲಿರುವ ಜುಂಜಪ್ಪ, ಈರಣ್ಣ, ಮುಂತಾದ ದೇವರುಗಳಿಗೆ ಸರಿ ಹೊಂದುವುದಿಲ್ಲವೆಂಬ ಮೂಢನಂಬಿಕೆಯಿಂದ ಇಂದಿಗೂ ವಿದ್ಯುತ್ ಸಂಪರ್ಕಗಳನ್ನು ಪಡೆದಿಲ್ಲ ಎಂದು ವಿಷಾದಿಸಿದರು.

ದಿನನಿತ್ಯದ ಬದುಕಿಗೆ ಅಡ್ಡಿ ಆತಂಕಗಳನ್ನು ಉಂಟು ಮಾಡದ ನಂಬಿಕೆಗಳನ್ನು ಮಾತ್ರ ನಾವು ರೂಢಿಸಿಕೊಳ್ಳಬೇಕು. ಇದರಿಂದ ನಮ್ಮ ಬದುಕು ಹಸನಾಗಲಿದೆ. ವೈಚಾರಿಕತೆಯನ್ನು ಬಳಸಿಕೊಳ್ಳುವುದರ ಮೂಲಕ ಗೊಲ್ಲ ಜನಾಂಗದವರು ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಿ ತಾವು ಪ್ರಗತಿ ಹೊಂದಬೇಕು ಎಂದು  ಕಿವಿಮಾತು ಹೇಳಿದರು.

ವಿಚಾರ ಸಂಕಿರಣ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ ಮಾತನಾಡಿ, ಹಿಂದುಳಿದ ವರ್ಗಗಳ ಪಟ್ಟಿಯ 1ಎ ನಲ್ಲಿ 108 ಸಮುದಾಯಗಳು ಇವೆ. ಅದರಲ್ಲಿ ಗೊಲ್ಲ ಸಮುದಾಯವೂ ಸಹ ಒಂದು. ಕಾನೂನಿನಿಂದ ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ.  ಬದಲಾಗಿ ಜನರಲ್ಲಿ ಜಾಗೃತಿ ಮೂಡಿಸಿ ಮೂಢ ನಂಬಿಕೆಗಳನ್ನು ಹೋಗಲಾಡಿಸಬೇಕೆಂದರು.

ಗೊಲ್ಲರ ಹಟ್ಟಿಗಳಲ್ಲಿ ಇಂದಿಗೂ ಜನ ಸೋಗೆ ಹಾಕಿ ಅದರ ಮೇಲೆ ಸಾಮೂಹಿಕ ಭೋಜನಗಳನ್ನು ಮಾಡುತ್ತಾರೆ. ಇದೂ ಸಹ ಅವರಲ್ಲಿರುವ ಮೂಢನಂಬಿಕೆಯನ್ನು ತೋರಿಸುತ್ತದೆ. ಆದರೆ ಸರ್ಕಾರ ಸಮುದಾಯ ಭವನಗಳನ್ನು ನಿರ್ಮಿಸಿಕೊಳ್ಳಲು ಸಾಕಷ್ಟು ಅನುದಾನವನ್ನು ಹಿಂದುಳಿದ ವರ್ಗಗಳಿಗೆ ನೀಡುತ್ತಿದ್ದು, ಗೊಲ್ಲ ಸಮುದಾಯದವರೂ ಸಹ ತಮಗೆ ಬೇಕಾದ ಸಮುದಾಯ ಭವನಗಳ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಲ್ಲಿ ಇದಕ್ಕೆ ತಾವೂ ಸಹ ಸರ್ಕಾರದೊಂದಿಗೆ ಮಾತನಾಡಿ, ಬೇಡಿಕೆಯನ್ನು ಈಡೇರಿಸುವುದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಡಾ. ಎಸ್. ರಫೀಕ್ ಅಹಮ್ಮದ್ ವಹಿಸಿದ್ದರು. ಪ್ರೊ. ಗುರುಲಿಂಗಯ್ಯ, ಪ್ರೊ.ನರಸಿಂಹಯ್ಯ, ಗುರುಮಲ್ಲಯ್ಯ, ಜಿ.ಪಂ. ಸದಸ್ಯೆ ಪ್ರೇಮಾಮಹಾಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Comment