ವಿಜ್ಞಾನದ ಅರಿವಿಲ್ಲದಿದ್ದರೆ ಅಭಿವೃದ್ದಿ ಅಸಾಧ್ಯ

ದಾವಣಗೆರೆ, ಸೆ. 11 – ವಿಜ್ಞಾನ ಇಲ್ಲದಿದ್ದರೆ ಖಂಡಿತ ಮುಂದುವರೆಯಲು ಸಾಧ್ಯವಿಲ್ಲವೆಂದು ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ಹೇಳಿದರು. ನಗರದ ಸಿದ್ದಗಂಗಾ ಪ್ರೌಢಶಾಲೆಯಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಸಿದ್ದಗಂಗಾ ವಿದ್ಯಾಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ 2018-19ನೇ ಸಾಲಿನ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪೈಪೋಟಿಯ ಯುಗದಲ್ಲಿ ನಮ್ಮ ದೇಶ ವಿಜ್ಞಾನ ಕ್ಷೇತ್ರದಲ್ಲಿ ಎಷ್ಟರ ಮಟ್ಟಿಗೆ ಬೆಳೆದಿದೆ ಬೇರೆ ದೇಶಗಳು ಎಷ್ಟು ಮುಂದುವರೆದಿವೆ ಎಂಬ ಚರ್ಚೆ ನಡೆಸಬೇಕು. ಇದರಿಂದ ಅನುಕೂಲಗಳು, ಅನಾನುಕೂಲವು ಇವೆ. ಇದನ್ನು ಬಳಸುವ ರೀತಿ ಬಹಳ ಮುಖ್ಯ. ವಿಜ್ಞಾನ ಜೀವನದ ದಾರಿದೀಪ. ವಿಜ್ಞಾನವನ್ನು ಜೀವನದಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಮನಗಾಣಬೇಕು. ಇಂದು ವಸ್ತು ಪ್ರದರ್ಶನದಲ್ಲಿ ಸುಮಾರು ಆರೇಳು ತಾಲ್ಲೂಕುಗಳಿಂದ ಬಂದಿರುವ ವಿದ್ಯಾರ್ಥಿಗಳು ಸಂಶೋಧನೆ, ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿರುವುದು ಉತ್ತಮ. ಎಲ್ಲಾ ಶಾಲೆಯ ಮಕ್ಕಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿಕೊಳ್ಳುವುದಕ್ಕೆ ಸೂಕ್ತ ವೇದಿಕೆಯಾಗಿದೆ. ವಸ್ತುಪ್ರದರ್ಶನದಲ್ಲಿ ತೊಡಗಿಸಿಕೊಂಡಿರುವುದರಿಂದ ಮುಂದಿನ ವಿಜ್ಞಾನಿಗಳಾಗಲು ಸಹಕಾರಿಯಾಗುತ್ತದೆ. ಸೌರಶಕ್ತಿ, ನೈಸರ್ಗಿಕ ಶಕ್ತಿ ಜೀವನಕ್ಕೆ ಎಷ್ಟು ಉಪಯೋಗವಾಗುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳಬೇಕು. ವಿಜ್ಞಾನ ಕ್ಷೇತ್ರದಲ್ಲಿ ದೇಶ ಮುಂದುವರೆಯಲು ಸಾಧ್ಯವಾಗುತ್ತದೆ. ವಿಜ್ಞಾನದಿಂದ ಕೆಟ್ಟದು ಮತ್ತು ಒಳ್ಳೆಯದು ಎರಡು ಸಹ ಇರುತ್ತದೆ. ಅಣುಬಾಂಬ್ ನಿಂದ ಅನುಕೂಲ ಹಾಗೂ ಅನಾನುಕೂಲವಾಗುತ್ತದೆ. ಇದನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಬೇಕು. ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದರಿಂದ ಕೆಲ ರಾಷ್ಟ್ರಗಳು ಮುಂದುವರೆಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಈಗಿನಿಂದಲೇ ಅನ್ವೇಷಣೆಗಳು, ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದು ಹೇಳಿದರು.ಜಿ.ಪಂ ಸದಸ್ಯರಾದ ಗೀತಗಂಗಾನಾಯ್ಕ್ ಮಾತನಾಡಿ, ಮಕ್ಕಳು ಪಠ್ಯ ಪುಸ್ತಕದ ಜೊತೆಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ವಿಜ್ಞಾನ ವಸ್ತು ಪ್ರದರ್ಶನಗಳು ಸೂಕ್ತವಾಗಿವೆ. ವಸ್ತು ಪ್ರದರ್ಶನದಲ್ಲಿ ಮಕ್ಕಳು ತೊಡಗಿಸಿಕೊಂಡುವುದರಿಂದ ಅವರ ಬುದ್ದಿಶಕ್ತಿಯೂ ಸಹ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮೇಯರ್ ಶೋಭಾಪಲ್ಲಾಗಟ್ಟೆ, ಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ.ಎಸ್.ಶಿವಣ್ಣ, ಹೆಚ್.ಕೆ.ಲಿಂಗರಾಜ, ಶೈಲಬಸವರಾಜ್ ಸೇರಿದಂತೆ ಮತ್ತಿತರರಿದ್ದರು.

Leave a Comment