ವಿಜಯನಗರ ಜಿಲ್ಲೆ ರಚನೆ ಖಂಡಿಸಿ ಬಳ್ಳಾರಿ ಬಂದ್ ಯಶಸ್ವಿ

ಸಿದ್ದರಾಮಪ್ಪ ಸಿರಿಗೇರಿ

ಬಳ್ಳಾರಿ,ಅ.1- ಬಳ್ಳಾರಿ ಜಿಲ್ಲೆ ಇಬ್ಭಾಗ ಮಾಡುವುದನ್ನು ವಿರೋಧಿಸಿ, ಹೊಸಪೇಟೆ ಕೇಂದ್ರವನ್ನಾಗಿಟ್ಟುಕೊಂಡು ನೂತನ ವಿಜಯನಗರ ಜಿಲ್ಲೆ ರಚನೆ ಮಾಡಲು ಹೊರಟಿರುವ ಸರಕಾರದ ಕ್ರಮ ಖಂಡಿಸಿ ಇಂದು ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಕರೆ ನೀಡಿದ್ದ ಬಳ್ಳಾರಿ ಬಂದ್ ಶಾಂತಿಯುತ ಯಶಸ್ವಿಯಾಗಿ ನಡೆಯಿತು.

ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೆಳಿಗ್ಗೆಯಿಂದಲೇ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಅಲ್ಲದೆ, ನಗರದ ಹೃದಯಭಾಗವಾದ ಗಡಗಿ ಚೆನ್ನಪ್ಪ ವೃತ್ತದ ಬಳಿ ಟೈಯರ್‍ಗಳಿಗೆ ಬೆಂಕಿ ಹಚ್ಚಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.

ಬಳ್ಳಾರಿಯ ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಹೊಸಪೇಟೆಯ ಅನರ್ಹ ಶಾಸಕ ಆನಂದ್‍ಸಿಂಗ್ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದರು.

ಬಂದ್ ಹಿನ್ನೆಲೆಯಲ್ಲಿ ನಗರದ ಅಂಗಡಿ-ಮುಂಗಟ್ಟುಗಳು, ಸಿನೇಮಾ ಥಿಯೇಟರ್‍ಗಳು, ಪೆಟ್ರೊಲ್ ಬಂಕ್, ಶಾಲಾ-ಕಾಲೇಜುಗಳು ಸೇರಿದಂತೆ ಸರಕಾರಿ ಕಚೇರಿಗಳು ಬಂದ್ ಆಗಿದ್ದವು.

ಸಾರಿಗೆ ಸಂಚಾರ ಸ್ಥಗಿತ:
ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರು ಬೈಕ್ ರ್ಯಾಲಿ ಮೂಲಕ ನಗರದ ಓಡಾಡುತ್ತಿರುವುದರಿಂದ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ನಗರದ ರಸ್ತೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು.
ಜಿಲ್ಲೆ ವಿಭಜನೆಯ ಮೂಲಕ ಕೆಲವರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಇದು ಸರಿಯಲ್ಲ. ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿ ಅಂಖಡವಾಗಿರುವ ನಮ್ಮ ಜಿಲ್ಲೆಯನ್ನು ಇಬ್ಭಾಗ ಮಾಡುವುದನ್ನು ಕೈ ಬಿಡಬೇಕು. ರಾಜ್ಯ ಸರಕಾರ ಇಂತಹ ನಿರ್ಧಾರವನ್ನು ಕೈ ಬಿಡಬೇಕು. ಅಲ್ಲದೆ, ಇಂತಹ ನಿರ್ಧಾರ ಕೈಗೊಳ್ಳುವಾಗ, ಜಿಲ್ಲೆಯ ಪ್ರತಿಷ್ಠತಿ ಸಂಸ್ಥೆಗಳು, ಜನಪ್ರತಿನಿಧಿಗಳನ್ನು ಗಣನೆಗೆ ತೆಗದುಕೊಳ್ಳಬೇಕು. ಜಿಲ್ಲೆ ವಿಭಜನೆ ಮಾಡಿದರೆ ತುಂಗಾಭದ್ರ ಜಲಾಶಯ ವಿಜಯನಗರ ಜಿಲ್ಲೆಗೆ ಸೇರಲಿದ್ದು, ಇದರಿಂದ ರೈತರಲ್ಲಿ ನೀರಿನ ಗಲಾಟೆಗಳಾಗಲಿವೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ಜಿಲ್ಲಾ ವಿಭಜನೆ ಸಲ್ಲದು ಎಂದು ಪ್ರತಿಭಟನಾಕಾರರು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ವಿಜಯನಗರ ಪ್ರತ್ಯೇಕ ಜಿಲ್ಲಾಗಾಗಿ ಕರ್ನಾಟಕ ಸರ್ಕಾರ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿರುವುದು ಅಕ್ಷಮ್ಯ ಅಪರಾಧ ಹಾಗೂ ಪ್ರಜಾಪ್ರಭುತ್ವ ವಿರೋಧಿ. ಇದು ಕೇವಲ ರಾಜಕೀಯ ಹಿತಾಸಕ್ತಿ ಹಾಗೂ ಅಧಿಕಾರ ಹಿತಾಸಕ್ತಿ ಮಾತ್ರಇಟ್ಟುಕೊಂಡು ತೆಗೆದುಕೊಳ್ಳುತ್ತಿರುವ ನಿರ್ಧಾರ.ಅನರ್ಹ ಶಾಸಕ ಆನಂದ್‍ಸಿಂಗ್ ಅವರ ಬೆಂಬಲ ಪಡೆಯುವ ಹಾಗೂ ವಿಜಯನಗರಕ್ಷೇತ್ರಕ್ಕೆ ನಡೆಯಲ್ಲಿರುವ ಉಪಚುನಾವಣೆಯ ಲಾಭ ಪಡೆಯುವುದೇ ಮುಖ್ಯ ಉದ್ದೇಶ ಆಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಈಗ 11 ತಾಲ್ಲೂಕುಗಳಾಗಿ ಆಡಳಿತಾತ್ಮಕವಾಗಿ ಎರಡು ಜಿಲ್ಲೆಗಳ ಅವಶ್ಯಕತೆಯಿದೆಯೆಂದಾದಲ್ಲಿ ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ ಹಾಗೂ ಸಾಮಾಜಿಕ ತಜ್ಞರ, ಚಿಂತಕರ ಜೊತೆ ಚರ್ಚೆ ನಡೆಸಬೇಕು. ಜನ ಜೀವನದ ಮೇಲಾಗುವ ಪರಿಣಾಮಕಾರಿ ನಿರ್ಧಾರವನ್ನು ಅವರ ಅಭಿಪ್ರಾಯ ಸಂಗ್ರಹ ಮಾಡದೇ ಅಹವಾಲುಗಳನ್ನು ಆಲಿಸದೇ, ಚರ್ಚೆ ನಡೆಸದೇ ತರಾತುರಿಯಲ್ಲಿ ತೆಗೆದುಕೊಳ್ಳುವ ನಿರ್ಧಾರವು ಪ್ರಜಾಪ್ರಭುತ್ವ ವಿರೋಧಿಯಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ದಿವಾಕರ ಬಾಬು ಭೇಟಿ:
ಮಾಜಿ ಸಚಿವ ಎಂ. ದಿವಾಕರ್ ಬಾಬು ಅವರು ನಗರದ ಗಡಗಿ ಚೆನ್ನಪ್ಪ ವೃತ್ತದ ಬಳಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬಂದ್‍ಗೆ ಬೆಂಬಲ ವ್ಯಕ್ತಪಡಿಪಡಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಮುಖಂಡರುಗಳಾದ ದರೂರು ಪುರುಷೋತ್ತಮಗೌಡ, ಮೇಕಲ ಈಶ್ವರರೆಡ್ಡಿ, ಟಪಾಲ್ ಗಣೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಮುಂಡ್ರಿಗಿ ನಾಗರಾಜ, ವೆಂಕಟೇಶ್ ಹೆಗಡೆ, ವಿಘ್ನೇಶ್, ಕುಂದಾಪುರ ನಾಗರಾಜ್, ಕಸಾಪ ಪಂಪಾಪತಿ, ಕನ್ನಡ ಚೈತನ್ಯ ವೇದಿಕೆ ಪ್ರಭುಕುಮಾರ್, ಇ.ವಿ.ಬಾಬು, ಕೆ.ಎರ್ರಿಸ್ವಾಮಿ, ಸಂಗನಕಲ್ಲು ಕೃಷ್ಣ, ಜಾಲಿಹಾಳ್ ಶ್ರೀಧರ್, ಚಂದ್ರಶೇಖರ ಆಚಾರ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ವಿ. ರವಿಕುಮಾರ, ಬಿ.ಎಂ.ಪಾಟೀಲ್, ಶಾನವಾಸಪುರ ಶರಣಪ್ಪಗೌಡ, ಗಂಗಾವತಿ ವೀರೇಶಪ್ಪ, ಕೆ.ಎರ್ರಿಸ್ವಾಮಿ, ಕುರುಗೋಡು ಚೆನ್ನಬಸವರಾಜ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಲಾರಿ ನಿಲ್ದಾಣದ ಬಳಿ ಟೈಯರ್‍ಗೆ ಬೆಂಕಿ:
ಬಳ್ಳಾರಿ ಜಿಲ್ಲೆ ವಿಭನೆ ಖಂಡಿಸಿ ಕರೆ ನೀಡಿರುವ ಬಳ್ಳಾರಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿರುವ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ನಗರದ ಲಾರಿ ಟರ್ಮಿನಲ್ ಬಳಿಯ ಬೆಂಗಳೂರು ರಸ್ತೆಯಲ್ಲಿ ಟೈಯರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಪ್ರತಿಭಟೆನೆಯಲ್ಲಿ ಸಂಘದ ಅಧ್ಯಕ್ಷ ವಿಜಯಭಾಸ್ಕರ್ ರೆಡ್ಡಿ, ಫೋಟೋ ರಾಜಾ, ನಟರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

 ಬೆಂಬಲ:
ವಿವಿಧ ಕನ್ನಡಪರ ಸಂಘಟನೆಗಳು, ಜಿಲ್ಲಾ ವಕೀಲರ ಸಂಘ, ರೈತ, ಆಟೋ, ಹಮಾಲರ, ಗಾರ್ಮೇಂಟ್ಸ್, ಕಾರ್ಮಿಕ ಮೊದಲಾದ ಸಂಘಟನೆಗಳು, ಶಾಲಾ-ಕಾಲೇಜುಗಳ ಒಕ್ಕೂಟ, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟೆನೆಯಲ್ಲಿ ಭಾಗವಹಿಸಿದ್ದರು.

ನಾಳೆ ಸರಕಾರಕ್ಕೆ ವರದಿ ಸಲ್ಲಿಕೆ
ಬಳ್ಳಾರಿ ಜಿಲ್ಲೆ ವಿಭಜನೆ ಖಂಡಿಸಿ, ನೂತನ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಇಂದು ವಿವಿಧ ಸಂಘಟನೆಗಳ ಮುಖಂಡರುಗಳು ಬಳ್ಳಾರಿ ಬಂದ್ ಆಚರಿಸುತ್ತಿದ್ದು, ಈ ಎಲ್ಲಾ ವರದಿಯನ್ನು ನಾಳೆ ಸರಕಾರಕ್ಕೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.
ನಗರದ ಗಡಗಿಚೆನ್ನಪ್ಪ ವೃತ್ತದ ಬಳಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ನಾನು ಬೆಂಗಳೂರಿಗೆ ತೆರಳಿಲಿದ್ದು, ನಗರದಲ್ಲಿ ಹಮ್ಮಿಕೊಂಡಿರುವ ಬಂದ್ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತೇನೆ ಎಂದರು.

ಬಾರೀ ಬಂದೋಬಸ್ತ್
ನೂತನ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ನಗರದಲ್ಲಿಂದು ವಿವಿಧ ಸಂಘಟನೆಗಳು ಬಂದ್ ಆಚರಿಸುತ್ತಿವೆ. ಬಂದ್ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ, ಬಳ್ಳಾರಿ ನಗರ ಹೊರತು ಪಡಿಸಿ, ಬೇರೆ ಯಾವ ತಾಲೂಕಿನಲ್ಲೂ ಬಂದ್ ಆಚರಣೆ ಇಲ್ಲ. ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗದಂತೆ ಶಾಂತಿಯುತವಾಗಿ ಬಂದ್ ಆಚರಿಸಬೇಕು ಎಂದು ಸಂಘಟನೆಗಳ ಮುಖಂಡರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ನಗರದ ಗಡಗಿ ಚೆನ್ನಪ್ಪ ವೃತ್ತದ ಬಳಿ ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಶಾಸಕರ ಮನೆಗಳಿಗೆ ಮುತ್ತಿಗೆ:
ಜಿಲ್ಲೆ ವಿಭಜನೆ ಮತ್ತು ವಿಜಯನಗರ ನೂತನ ಜಿಲ್ಲೆ ರಚನೆ ವಿರೋಧಿಸಿ ಹಲವು ಸಂಘಟನೆಗಳು ಇಂದು ಬಳ್ಳಾರಿ ಬಂದ್ ಆಚರಿಸುತ್ತಿದ್ದರೂ ಬಳ್ಳಾರಿ ನಿವಾಸಿಗಳಾದ ಸಹ ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ ಮತ್ತು ಕೆ.ಸಿ.ಕೊಂಡಯ್ಯ ಅವರ ಮನೆಗೆ ಪ್ರತಿಭಟನಾಕಾರರು ಬೈಕ್ ರ್ಯಾಲಿ ಮೂಲಕ ತೆರಳಿ ಮುತ್ತಿಗೆ ಹಾಕಿದರು. ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಲು ಹೊರಟಿರುವ ಸರಕಾರದ ವಿರುದ್ಧ ಗಮನ ಸೆಳೆಯಲು ಬಂದ್ ನಲ್ಲಿ ಭಾಗವಹಿಸಬೇಕು ಎಂದು ಆಗ್ರಹಿಸಿದರು. ಆದರೆ, ಇಬ್ಬರೂ ಶಾಸಕರುಗಳು ಮನೆಯಲ್ಲಿ ಇಲ್ಲದ್ದರಿಂದ ಪ್ರತಿಭಟನಾಕಾರು ವಾಪಸ್ ಬಂದರು.

Leave a Comment