ವಿಚಾರವಾದಿಗಳ ಬಂಧನ ಆರು ದಿನ ವಿಸ್ತರಣೆ

ನವದೆಹಲಿ, ಸೆ. ೬: ಎಡಪಂಥೀಯ ಐವರು ನಕ್ಸಲ್ ಬೆಂಬಲಿತ ವಿಚಾರವಾದಿಗಳ ಗೃಹ ಬಂಧನದ ಅವಧಿಯನ್ನು ಸುಪ್ರೀಂ ಕೋರ್ಟ್ ಸೆ. ೧೨ರವರೆಗೆ ವಿಸ್ತರಿಸಿ ಆದೇಶ ನೀಡಿದೆ.
ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮ್ಮಕ್ಕು ನೀಡಿದ ಹಾಗೂ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇರೆಗೆ ಈ ನಕ್ಸಲ್ ಬೆಂಬಲಿತ ಐವರು ಮಾನವ ಹಕ್ಕು ಹೋರಾಟಗಾರರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು. ಇದರಿಂದಾಗಿ ದೇಶಾದ್ಯಂತ ಎಡಪಂಥೀಯ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದು ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯದ ಹರಣ ಮಾಡಲಾಗುತ್ತಿದೆ; ಬಂಡಾಯವನ್ನು ಹತ್ತಿಕ್ಕಲು ಕೇಂದ್ರ ಹವಣಿಸಿದೆ ಎಂದೆಲ್ಲ ಹುಯಿಲೆಬ್ಬಿಸಿದ್ದರು.
ಭಿನ್ನಮತ ಎಂಬುದು ಪ್ರಜಾಪ್ರಭುತ್ವದ ಲಕ್ಷಣ ಎಂದು ಸುಪ್ರೀಂ ಕೋರ್ಟ್ ಹೇಳಿದ್ದ ಅಭಿಪ್ರಾಯಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹತ್ತಿಕ್ಕುವ ಪ್ರಶ್ನೆಯೇ ಇಲ್ಲ; ಆದರೆ ಸಿದ್ಧಾಂತವೊಂದರ ಹೆಸರಿನಲ್ಲಿ ದೇಶವನ್ನು ಒಡೆಯುವ ದೇಶದ್ರೋಹವನ್ನು ಮಾತ್ರ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕ್ರಾಂತಿಕಾರಿ ಕವಿ ಹಾಗೂ ಪತ್ರಕರ್ತ ಆಂಧ್ರದ ವರವರ ರಾವ್ ಸೇರಿದಂತೆ ಐವರು ನಕ್ಸಲೀಯ ಬೆಂಬಲಿತ ಹೋರಾಟಗಾರರನ್ನು ಸುಪ್ರೀಂ ಕೋರ್ಟ್ ಆ. ೨೮ ರಂದು ಗೃಹ ಬಂಧನಕ್ಕೆ ಒಳಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Comment