ವಿಆರ್‍ಡಬ್ಯ್ಲು, ಎಂಆರ್‍ಡಬ್ಲ್ಯುಗಳ ಕಾರ್ಯವೈಖರಿ ತನಿಖೆಗೆ ಒತ್ತಾಯ

ತುಮಕೂರು, ಅ. ೧೧- ಸರ್ಕಾರದಿಂದ ಗೌರವ ಧನ ಪಡೆದು ಅಂಗವಿಕಲರ ಪುನರ್ವಸತಿಗಾಗಿ ಕಾರ್ಯನಿರ್ವಹಿಸುತ್ತಿರುವ ವಿಆರ್‍ಡಬ್ಲ್ಯು ಮತ್ತು ಎಂ.ಆರ್.ಡಬ್ಲ್ಯುಗಳು ನೀಡುವ ವರದಿಯನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಹಾಗೂ ಇಲಾಖೆಯ ನಿಯಮದಂತೆ ಆರ್ಹರನ್ನು ಮಾತ್ರ ಈ ಹುದ್ದೆಗೆ ನೇಮಕ ಮಾಡುವಂತೆ ಜಿಲ್ಲಾ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಕೆ.ಎನ್. ಸುಧೀಂದ್ರಕುಮಾರ್ ಒತ್ತಾಯಿಸಿದರು.

ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಅಂಗವಿಕಲ ಕಲ್ಯಾಣ ಆಯೋಗದ ನಿಯಮದಂತೆ ನೇಮಕಗೊಂಡಿರುವ ವಿ.ಆರ್.ಡಬ್ಲ್ಯು ಮತ್ತು ಎಂಆರ್‍ಡಬ್ಲ್ಯು ಅವರ ಕಾರ್ಯವೈಖರಿಯನ್ನು ಪ್ರತಿ 6 ತಿಂಗಳಿಗೊಮ್ಮೆ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪರಿಶೀಲಿಸಿ, ಅವರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲವೆಂದು ಕಂಡು ಬಂದಲ್ಲಿ ಅವರನ್ನು ಬದಲಾಯಿಸಿ, ಬೇರೊಬ್ಬರನ್ನು ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಕಳೆದ 10 ವರ್ಷಗಳಿಂದ ಈ ಕೆಲಸ ಆಗಿಲ್ಲ. ಇದನ್ನು ಪ್ರಶ್ನಿಸಿದ ಕಾರಣಕ್ಕೆ, ಅಧಿಕಾರಿಗಳು ಮತ್ತು ಕೆಲ ವಿಆರ್‍ಡಬ್ಲ್ಯು ಮತ್ತು ಎಂಆರ್‍ಡಬ್ಲ್ಯುಗಳು ಸೇರಿ ಕಳೆದ ಸೆ. 23 ರಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ, ನಮ್ಮ ಸಂಘಟನೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದು ಖಂಡನೀಯ ಎಂದರು.

ಜಿಲ್ಲೆಯ 331 ಗ್ರಾಮ ಪಂಚಾಯಿತಿಗಳಲ್ಲಿ 280 ಜನ ವಿಆರ್‍ಡಬ್ಲ್ಯುಗಳು ತಾಲ್ಲೂಕಿಗೆ ಒಬ್ಬರಂತೆ ಎಂಅರ್‍ಡಬ್ಲ್ಯುಗಳು ಕೆಲಸ ಮಾಡುತ್ತಿದ್ದು, ಇದುವರೆಗೂ ಜಿಲ್ಲೆಯಲ್ಲಿ ಅಂಗವಿಕಲರ ಗಣತಿಯನ್ನು ಸರಿಯಾದ ರೀತಿ ಮಾಡಿಲ್ಲ. ಗ್ರಾಮೀಣ ಭಾಗದಲ್ಲಿರುವ ಅಂಗವಿಕಲರಿಗೆ ಸರ್ಕಾರದ ವಿವಿಧ ಯೋಜನೆಗಳ ಫಲ ದೊರೆಯುವಂತೆ ಮಾಹಿತಿ ನೀಡಿ, ಅವರನ್ನು ಅರ್ಜಿ ಸಲ್ಲಿಸುವಂತೆ ಪ್ರೋತ್ಸಾಹಿಸಬೇಕಾದ ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರು, ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು ತ್ರಿಚಕ್ರವಾಹನ ಪಡೆಯಲು, ಗುರುತಿನ ಚೀಟಿ ಪಡೆಯಲು ಅಂಗವಿಕಲರಿಂದ ಹಣ ಪಡೆಯುತ್ತಿದ್ದು, ಈ ಬಗ್ಗೆ ಸಾಕ್ಷ್ಯ ಸಮೇತ ದೂರು ನೀಡಿದ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳು, ಇಲಾಖೆಯ ನೌಕರರನ್ನೇ ಎತ್ತಿಕಟ್ಟಿ, ನಮ್ಮ ಸಂಘದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ತುಮಕೂರು ಜಿಲ್ಲಾ ಅಂಗವಿಕಲರ ಒಕ್ಕೂಟ ನೊಂದಾಯಿತ ಸಂಸ್ಥೆಯಾಗಿದ್ದರೂ ಸರ್ಕಾರ ಮತ್ತು ಸರ್ಕಾರೇತ ಸಂಸ್ಥೆಯಿಂದ ಯಾವುದೇ ಅನುದಾನ ಪಡೆದಿಲ್ಲ. ಇಲ್ಲಿ ನೊಂದಾಯಿಸಿರುವ ವ್ಯಕ್ತಿಗಳೇ ತಮ್ಮ ಕೈಲಾದ ಸಹಕಾರ ಮತ್ತು ದಾನಿಗಳ ನೆರವಿನೊಂದಿಗೆ ಅಂಗವಿಕಲರ ಕಲ್ಯಾಣಕ್ಕೆ ಸಂಘಟನೆಗೆ ದುಡಿಯುತ್ತಿದೆ. ನಮ್ಮ ಸಂಘಟನೆ ವತಿಯಿಂದ ಜಿಲ್ಲಾ ಕೇಂದ್ರ ಮತ್ತು ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಅಂಗವಿಕಲರಿಗೆ ದೊರೆಯುಬೇಕಿರುವ ಸವಲತ್ತುಗಳ ಬಗ್ಗೆ 200ಕ್ಕೂ ಹೆಚ್ಚು ಪತ್ರ ನೀಡಲಾಗಿದೆ. ಇದುವರೆಗೂ ಒಂದಕ್ಕೂ ಸಮರ್ಪಕ ಉತ್ತರ ನೀಡಿಲ್ಲ. ಬದಲಾಗಿ ಅಂಗವಿಕಲರಲ್ಲಿಯೇ ಒಡಕು ಮೂಡಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಸ್ಪಷ್ಟನೆ ನೀಡಿ, ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಂಗವಿಕಲರ ಒಕ್ಕೂಟದ ಗಾಯಿತ್ರಿ ರವೀಶ್, ನಾಗರಾಜು, ಚಂದ್ರಶೇಖರ್, ಕುಮಾರ್, ಹನುಮಂತಯ್ಯ, ಅವಿನಾಶ್, ರಂಗನಾಥಯ್ಯ, ವೆಂಕಟೇಶ್, ದೊಡ್ಡತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Comment