ವಿಂಡೀಸ್ ಮಣಿಸಿದ ಭಾರತ ವನಿತೆಯರಿಗೆ ಏಕದಿನ ಸರಣಿ

ಅಂಟಿಗುವಾ, ನ.7 – ಸ್ಟಾರ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್ (69) ಹಾಗೂ ಸ್ಮೃತಿ ಮಂಧನಾ (74) ಅವರುಗಳ ಭರ್ಜರಿ ಜೊತೆಯಾಟದ ನೆರವಿನಿಂದ ಭಾರತ ವನಿತೆಯರ ತಂಡ ಆರು ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ, ಮೂರು ಏಕದಿನ ಪಂದ್ಯವನ್ನು 2-1 ರಿಂದ ಗೆದ್ದು ಬೀಗಿದೆ.

ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡದ ಆರಂಭಿಕರು ತಂಡಕ್ಕೆ ಉತ್ತಮ ಆರಂಭ ನೀಡಲಿಲ್ಲ. ಸ್ಟಫಾನಿ ಟೇಲರ್ ಹಾಗೂ ಟ್ಯಾಕ್ ಆನ್ ಕಿಂಗ್ ಜೋಡಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿತು. 80 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಈ ಜೋಡಿ ಆಸರೆಯಾದರು.

ಸ್ಟಫಾನಿ 112 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 79 ರನ್ ಸಿಡಿಸಿದರು. ಅನಾ ಕಿಂಗ್ 38 ರನ್ ಸಿಡಿಸಿದರು. ಅಂತಿಮವಾಗಿ ವಿಂಡೀಸ್ 50 ಓವರ್ ಗಳಲ್ಲಿ 194 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಜೂಲನ್ ಗೋಸ್ವಾಮಿ ಮತ್ತು ಪೂನಮ್ ಯಾದವ್ ತಲಾ ಎರಡು ವಿಕೆಟ್ ಪಡೆದರು.

ಗುರಿಯನ್ನು ಹಿಂಬಾಲಿಸಿದ ಜೆಮಿಮಾ ಹಾಗೂ ಸ್ಮೃತಿ ಜೋಡಿ ಸಾಧಾರಣ ಗುರಿಯನ್ನು ಬೆನ್ನತ್ತುವ ಯೋಜನೆಯನ್ನು ಬಳಸಿಕೊಂಡು ಬ್ಯಾಟ್ ಮಾಡಿತು. ಈ ಜೋಡಿ ವಿಂಡೀಸ್ ತಂಡದ ಬೌಲರ್ ಗಳನ್ನು ಕಾಡಿದರು. ಈ ಜೋಡಿ 25 ಓವರ್ ಬ್ಯಾಟಿಂಗ್ ನಡೆಸಿ ವಿಕೆಟ್ ಕಾಯ್ದುಕೊಂಡಿತು. ಅಲ್ಲದೆ ತಂಡಕ್ಕೆ 141 ರನ್ ಕಾಣಿಕೆ ನೀಡಿತು.

ಜೆಮಿಮಾ 92 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 69 ರನ್ ಸೇರಿಸಿದರು. ಸ್ಮೃತಿ 63 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 74 ರನ್ ಬಾರಿಸಿದರು.

ಪೂನಮ್ ರಾವತ್ 24, ಮಿಥಾಲಿ ರಾಜ್ 20 ರನ್ ಸಿಡಿಸಿದರು. ಅಂತಿಮವಾಗಿ ಭಾರತ 42.1 ಓವರ್ ಗಳಲ್ಲಿ 4 ವಿಕೆಟ್ ಗೆ 195 ರನ್ ಸೇರಿಸಿ ಜಯ ದಾಖಲಿಸಿತು.

Leave a Comment