ವಿಂಡೀಸ್ ಪ್ರವಾಸದಿಂದ ಧೋನಿ ಹೊರಗೆ

ನವದೆಹಲಿ, ಜು ೧೭- ಮುಂಬರುವ ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಪ್ರವಾಸದಿಂದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಧೋನಿ ಅವರೇ, ತಮ್ಮ ಅಲಭ್ಯತೆಯನ್ನು ಬಿಸಿಸಿಐಗೆ ತಿಳಿಸಿದ್ದಾರೆ. ಮುಂಬರುವ ಸರಣಿಗಳಲ್ಲಿ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಧೋನಿ ಮೊದಲ ಆಯ್ಕೆಯಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಧೋನಿ ಅವರು ತಂಡದ ಪರಿವರ್ತನೆಗೆ ನೆರವಾಗಲಿದ್ದಾರೆ ಎನ್ನಲಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ರಿಷಬ್ ಪಂತ್ ತಂಡದ ಜೊತೆಗಿರಲಿದ್ದಾರೆ. ಹಾಗೆಯೇ ಭವಿಷ್ಯದಲ್ಲೂ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಮೊದಲು ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿದೆ. ನಾಳೆ ಅಥವಾ ನಾಡಿದ್ದು ಸಭೆ ಸೇರಲಿರುವ ರಾಷ್ಟ್ರೀಯ ಆಯ್ಕೆ ಸಮಿತಿಯು ವಿಂಡೀಸ್ ವಿರುದ್ಧದ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲಿದೆ.

ರಿಷಬ್ ಪಂತ್‌ಗೆ ತರಬೇತಿ
ಇನ್ನು ಟೀ ಇಂಡಿಯಾದ ಪರ ಅದ್ಭುತ ವಿಕೆಟ್ ಕೀಪಿಂಗ್ ಮಾಡಿರುವ ಧೋನಿ ಅವರು ಸದ್ಯ ನಿವೃತ್ತಿ ಘೋಷಣೆ ಮಾಡುವುದಿಲ್ಲವಂತೆ. ಅಪೂರ್ಣ ಕೆಲಸವೊಂದನ್ನು ಪೂರ್ಣಗೊಳಿಸಿದ ಮೇಲೆ ನಿವೃತ್ತಿ ಘೋಷಣೆ ಮಾಡುತ್ತಾರೆ ಎನ್ನಲಾಗಿದೆ. ಹೌದು ತಂಡಕ್ಕೆ ಉತ್ತಮ ವಿಕೆಟ್ ಕೀಪರ್ ಲಭ್ಯವಾಗುವವರೆಗೂ ಧೋನಿ ನಿವೃತ್ತಿ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕಾಗಿ ರಿಷಭ್ ಪಂತ್‌ಗೆ ಧೋನಿ ಸಂಪೂರ್ಣ ತರಬೇತಿ ನೀಡಲಿದ್ದಾರೆ. ತಂಡದ ೧೫ ಆಟಗಾರರಲ್ಲಿ ಒಬ್ಬರಾಗಿರುವ ಧೋನಿ ಮೈದಾನಕ್ಕೆ ಇಳಿಯುವ ಬದಲು ತರಬೇತಿ ಮೂಲಕ ತಂಡದ ಜೊತೆ ಇರಲಿದ್ದಾರೆ. ಟಿ-೨೦ ವಿಶ್ವಕಪ್ ವೇಳೆಗೆ ಪಂತ್ ೨೩ನೇ ವಯಸ್ಸಿಗೆ ಕಾಲಿಡಲಿದ್ದು, ಅಷ್ಟರಲ್ಲಿ ಪಂತ್ ರನ್ನು ಅತ್ಯುತ್ತಮ ವಿಕೆಟ್ ಕೀಪರ್ ಮಾಡುವುದು ಧೋನಿ ಗುರಿ ಎನ್ನಲಾಗಿದೆ.

ಮತ್ತೆ ಯುವರಾಜ್ ಸಿಂಗ್ ತಂದೆ ಕಿಡಿ
ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋಲಲು ಧೋನಿಯೇ ಕಾರಣ ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಆರೋಪಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಧೋನಿ ಬೇಕೆಂದೇ ರನೌಟ್ ಆದರು. ಅವರು ಕ್ರೀಸ್ ಗಿಂತ ಕೆಲವೇ ಇಂಚು ದೂರದಲ್ಲಿದ್ದರು. ಇದು ಉದ್ದೇಶಪೂರ್ವಕವಾಗಿಯೇ ಮಾಡಿದ ಕೃತ್ಯ. ಇಷ್ಟು ವರ್ಷ ಕ್ರಿಕೆಟ್ ಆಡಿದ ಮೇಲೆ ಅವರಿಗೆ ಯಾವ ಸಂದರ್ಭದಲ್ಲಿ ಹೇಗೆ ಆಡಬೇಕು ಎಂದು ಗೊತ್ತಿಲ್ಲವೇ? ಎಂದು ಸಂದರ್ಶನವೊಂದರಲ್ಲಿ ಯೋಗರಾಜ್ ಆರೋಪಗಳ ಸುರಿಮಳೆಗೈದಿದ್ದಾರೆ.

Leave a Comment