ವಿಂಡೀಸ್‌ ವಿರುದ್ಧ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್‌: ಲಿಟಾನ್‌ ದಾಸ್‌

ಟಾಂಟನ್‌, ಜೂ 18 – ದೇಶೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದೇ ಲಯ ಮುಂದುವರಿಸುವಲ್ಲಿ ವಿಫಲನಾಗಿದ್ದೆ. ಆದರೆ, ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದು ವೃತ್ತಿ ಜೀವನದ ದೊಡ್ಡ ಸಾಧನೆ ಎಂದು ಬಾಂಗ್ಲಾದೇಶ ತಂಡದ ಬ್ಯಾಟ್ಸ್‌ಮನ್‌ ಲಿಟಾನ್‌ ದಾಸ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಡೆದ ಐಸಿಸಿ ವಿಶ್ವಕಪ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 7 ವಿಕೆಟ್‌ಗಳಿಂದ ಬಾಂಗ್ಲಾ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ವೆಸ್ಟ್ ಇಂಡೀಸ್‌ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 321 ರನ್‌ ಕಲೆ ಹಾಕಿತ್ತು. ಬಳಿಕ 322 ರನ್‌ ಗುರಿ ಬೆನ್ನತ್ತಿದ ಬಾಂಗ್ಲಾದೇಶ 41.3 ಮೂರು ವಿಕೆಟ್‌ ಕಳೆದುಕೊಂಡು 322 ರನ್‌ ಗಳಿಸಿ ಇನ್ನೂ 51 ಎಸೆತಗಳು ಬಾಕಿ ಇರುವಂತೆಯೇ ಜಯ ಸಾಧಿಸಿತು.

ಪಂದ್ಯದ ಬಳಿಕ ಮಾತನಾಡಿದ ಲಿಟಾನ್‌ ದಾಸ್, ಒಂದು ತುದಿಯಲ್ಲಿ ಶಕೀಬ್‌ ಅಲ್‌ ಹಸನ್‌ ಅವರು ಗಳಿಸುತ್ತಿದ್ದ ಬೌಂಡರಿಗಳು ನನ್ನಲ್ಲಿದ್ದ ಒತ್ತಡ ಕಡಿಮೆ ಮಾಡುತ್ತಿತ್ತು. ಪಂದ್ಯದ ಬಳಿಕ ನಾನು ಒಂದು ಅಂಶ ಹೇಳಲು ಬಯಸುತ್ತೇನೆ. ಈ ರೀತಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದು ಇದೇ ಮೊದಲು. ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ್ದೇನೆ. ಆದರೆ, ಬಾಂಗ್ಲಾ ಪರ ಉತ್ತಮ ಪ್ರದರ್ಶನ ತೋರಿ ಪಂದ್ಯದ ಗೆಲುವಿಗೆ ನೆರವಾಗಿದ್ದು ನಿಜಕ್ಕೂ ದೊಡ್ಡ ಸಾಧನೆ ಎಂದು ಹೇಳಿಕೊಂಡರು.

ಕ್ರೀಸ್‌ಗೆ ಆಗಮಿಸಿದ ಆರಂಭದಲ್ಲಿ ಬ್ಯಾಟಿಂಗ್‌ ಮಾಡಲು ತಳಮಳಗೊಂಡೆ. ಆದರೆ, ವೈಯಕ್ತಿಕ 30 ರನ್‌ ಗಳಿಸಿದ ಬಳಿಕ ಪಿಚ್‌ಗೆ ತಕ್ಕಂತೆ ಹೊಂದಿಕೊಂಡೆ ಹಾಗೂ ನನಗೆ ಬೇಕಾದ ರೀತಿಯಲ್ಲಿ ಬ್ಯಾಟಿಂಗ್‌ ಮಾಡಬಹುದು ಎಂದ ಅರ್ಥ ಮಾಡಿಕೊಂಡೆ. 30 ರನ್‌ ಬಳಿಕ ಸುಲಲಿತವಾಗಿ ಬ್ಯಾಟಿಂಗ್‌ ಮಾಡಿದೆ ಎಂದರು.

ತುಂಬಾ ದಿನಗಳ ಬಳಿಕ ಅಂಗಳಕ್ಕೆ ಮರಳಿದ ನಾನು ಈ ಪಂದ್ಯದಲ್ಲಿ ಮೊದಲು ತಳಮಳಕ್ಕೆ ಒಳಗಾದೆ. ಆದರೆ, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದು ತುಂಬಾ ಮುಖ್ಯವೆನಿಸಿತು. ಇದರಿಂದಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಲಿದೆ ಎಂದು ಲಿಟಾನ್‌ ದಾಸ್‌ ತಿಳಿಸಿದರು.

ಬಾಂಗ್ಲಾದೇಶ ಜೂನ್‌ 20 ರಂದು ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಶಾರ್ಟ್‌ ಎಸೆತಗಳನ್ನು ಎದುರಿಸಿ ಗೆಲುವು ಸಾಧಿಸಿದ್ದು, ಆಸೀಸ್‌ ವಿರುದ್ಧದ ಮುಂದಿನ ಪಂದ್ಯಕ್ಕೆ ನೆರವಾಗಲಿದೆ ಎಂದು ದಾಸ್ ಇದೇ ವೇಳೆ ಹೇಳಿದರು.

Leave a Comment