ವಾಹನಗಳ ಮೇಲೆ ನಾಮಫಲಕ 300 ಮಂದಿ ದಂಡ

ಬೆಂಗಳೂರು, ಜೂ. ೧೯- ಖಾಸಗಿ ವಾಹನ ಮಾಲೀಕರು ತಮ್ಮ ವಾಹನ ಮುಂಭಾಗ ಮತ್ತು ಹಿಂಭಾಗ ಸಂಘ ಸಂಸ್ಥೆಗಳ ಹೆಸರಿನ ನಾಮಫಲಕ, ನಂಬರ್ ಪ್ಲೇಟ್‌ಗಳ ಮೇಲೆ ಇತರೆ ಹೆಸರುಗಳನ್ನು ಬರೆಸಿಕೊಂಡಿರುವುದರ ವಿರುದ್ಧ ಸಮರ ಸಾರಿರುವ ಆರ್.ಟಿ.ಒ. ಅಧಿಕಾರಿಗಳು ಇಂದು ಏಕಕಾಲದಲ್ಲಿ ನಗರದ ಆರು ಕಡೆ ಮಧ್ಯಾಹ್ನದವರೆಗೆ 300ಕ್ಕೂ ಹೆಚ್ಚು ವಾಹನಗಳಿಗೆ ದಂಡ ವಿಧಿಸಿದ್ದಾರೆ.

ನಗರದ ವಿಕಾಸಸೌಧ, ಕಬ್ಬನ್ ಪಾರ್ಕ್, ಕಾರ್ಪೊರೇಷನ್, ಕ್ವೀನ್ಸ್ ರಸ್ತೆ ಸೇರಿದಂತೆ, 6 ಕಡೆ ಆರ್.ಟಿ.ಒ. ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಖಾಸಗಿ ವಾಹನಗಳು ನಂಬರ್ ಪ್ಲೇಟ್ ಮೇಲಿನ ಹೆಸರುಗಳನ್ನು ಕಿತ್ತುಹಾಕಿ ದಂಡ ವಿಧಿಸಿದ್ದಾರೆ. ಮೋಟಾರ್ ವಾಹನ ಕಾಯ್ದೆ ಪ್ರಕಾರ ಸರ್ಕಾರದ ಅಧಿಕೃತ ವಾಹನಗಳಿಗಷ್ಟೇ ಸರ್ಕಾರಿ ವಾಹನ ಎಂದು ಬರೆಯಿಸಿಕೊಳ್ಳಬಹುದು. ಖಾಸಗಿ ವಾಹನಗಳ ಮಾಲೀಕರು ವಾಹನಗಳ ಮೇಲೆ ನಂಬರ್ ಪ್ಲೇಟ್ ಹೊರತುಪಡಿಸಿ ಬೇರೆ ಯಾವುದೇ ಸಂಘ ಸಂಸ್ಥೆಗಳ ಹೆಸರಾಗಲಿ, ನಾಮಫಲಕಗಳನ್ನು ಅಳವಡಿಸಿಕೊಳ್ಳುವಂತಿಲ್ಲ.

ಈ ಹಿನ್ನೆಲೆಯಲ್ಲಿ ಆರ್.ಟಿ.ಒ. ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಇದೇ ವೇಳೆ ಕಾರಿನ ಕಿಟಕಿ ಗಾಜಿನ ಮೇಲೆ ಅಳವಡಿಸಿದ್ದ ಕಪ್ಪು ಕಾಗದವನ್ನು ಕೂಡ ಕಿತ್ತುಹಾಕಿ ವಾಹನ ಮಾಲೀಕರಿಗೆ ದಂಡ ವಿಧಿಸಿದ್ದಲ್ಲದೆ, ನೋಟೀಸ್ ಕೂಡ ಜಾರಿ ಮಾಡಿದ್ದಾರೆ.

ಹಲವಾರು ವಾಹನಗಳ ಮಾಲೀಕರು ತಾವು ಪ್ರತಿನಿಧಿಸುವ ಸಂಘ ಸಂಸ್ಥೆಗಳ ನಾಮಫಲಕಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಇದು ಕಾನೂನುಬಾಹಿರ. ಹಾಗಾಗಿ ಈ ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ. ಇದು ನಿರಂತರವಾಗಿ ಮುಂದುವರೆಯಲಿದೆ ಎಂದು ಆರ್.ಟಿ.ಒ. ಇಲಾಖೆ ಜಂಟಿ ಆಯುಕ್ತ (ಬೆಂಗಳೂರು ನಗರ) ಜ್ಞಾನೇಂದ್ರ ಕುಮಾರ್ ಅವರು ಸಂಜೆ ವಾಣಿಗೆ ತಿಳಿಸಿದರು.

ಇಂದು ಸಂಜೆಯವರೆಗೂ ಕಾರ್ಯಾಚರಣೆ ಮುಂದುವರೆಯಲಿದೆ. ಖಾಸಗಿ ವಾಹನ ಮಾಲೀಕರಿಗೆ ದಂಡ ವಿಧಿಸುವುದು ಮುಖ್ಯ ಉದ್ದೇಶವಲ್ಲ. ಅವರಲ್ಲಿ ಜಾಗೃತಿಯನ್ನು ಉಂಟು ಮಾಡುವುದೂ ಕೂಡ ಕಾರ್ಯಾಚರಣೆಯ ಉದ್ದೇಶ ಎಂದು ತಿಳಿಸಿದರು.

ಡಿಪಿಆರ್ ನಿಗದಿಪಡಿಸಿದ ಸರ್ಕಾರಿ ವಾಹನಗಳಷ್ಟೇ ಕಾರಿನ ಹಿಂಭಾಗ ಮತ್ತು ಮುಂಭಾಗ ಸರ್ಕಾರಿ ವಾಹನ ಎಂದು ನಾಮಫಲಕ ಹಾಕಿಕೊಳ್ಳಬಹುದು. ಅದರ ಹೊರತು ಬೇರೆ ಯಾವುದೇ ಖಾಸಗಿ ವಾಹನಗಳು, ಕಾರುಗಳ ಮೇಲೆ ನಾಮಫಲಕ ಹಾಕಿಕೊಳ್ಳುವಂತಿಲ್ಲ ಎಂದು ಸ್ಪಷ್ಟನೆ ನೀಡಿದರು.

Leave a Comment