ವಾಸ ಯೋಗ್ಯ ಹೊಸ ಗ್ರಹ ಪತ್ತೆ

ಹೊಸದಾಗಿ ಪತ್ತೆಯಾಗಿರುವ ರೋಸ್ ೧೨೮ ಬಿ ಸೌರ ಮಂಡಲಕ್ಕೆ ೨ನೇ ಅತಿ ಹತ್ತಿರದ ಗ್ರಹವಾಗಿದ್ದು, ಇದನ್ನು ಪ್ರಬಲ ಟೆಲಿಸ್ಕೋಪ್ ಮೂಲಕ ನೋಡಬಹುದಾಗಿದೆ. ಭೂಮಿಯಿಂದ ೧೧ ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಈ ಗ್ರಹವನ್ನು ಯೂರೋಪಿಯನ್ ಸದರನ್ ಗ್ರಹಗಳ ಶೋಧ ವೀಕ್ಷನಾಲಯದ ಮೂಲಕ ಪತ್ತೆ ಹಚ್ಚಲಾಗಿದೆ.

ಈ ಗ್ರಹ ಸುತ್ತುತ್ತಿರುವ ನಕ್ಷತ್ರ ಹೆಚ್ಚು ಪ್ರಕಾಶಮಾನವಾಗಿಲ್ಲದೆ ತಂಪಾಗಿರುವುದರಿಂದ ಇಲ್ಲಿ ಭೂಮಿಯ ಮೇಲ್ಮೈ ವಾತಾವರಣವಿದ್ದು, ಜೀವಿಗಳ ವಾಸ ಯೋಗ್ಯ ವಾತವರಣ ಇರುವ ಸಾಧ್ಯತೆ ಇದೆ.  ಈ ಕುರಿತ ಅಧ್ಯಯನ ವರದಿ ಖಗೋಳ ಮತ್ತು ಖಭೌತ ನಿಯತಕಾಲಿಕ ನ್ಯೂಸ್ ಸ್ಟಡಿಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಜೀವವಾಸ ಯೋಗ್ಯ ವಾತಾವರಣ ಇರಬಹುದೆಂದು ಶಂಕಿಸಲಾದ ಇನ್ನೊಂದು ಹೊಸ ಗ್ರಹವನ್ನು ಪತ್ತೆ ಹಚ್ಚಿರುವುದಾಗಿ ಯೂರೋಪಿಯನ್ ಸದರನ್ ಅಬ್ಸರ್ವೇಟರಿ ಅಧ್ಯಯನ ತಂಡ (ಇಎಸ್‌ಓ) ಬುಧವಾರ (ನವೆಂಬರ್ ೧೫) ಹೇಳಿದೆ. ಪತ್ತೆಹಚ್ಚಲಾಗಿರುವ ರೋಸ್ ೧೨೮ ಬಿ ಹೆಸರಿನ ಗ್ರಹ ಎರ್ಗೊ ನಕ್ಷತ್ರ ರಾಶಿಯಲ್ಲಿರುವ ನಕ್ಷತ್ರವನ್ನು ಸುತ್ತುತ್ತಿದ್ದು, ಇದು ಸೌರ ಮಂಡಲದಿಂದ ೧೧ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ.

ಒಂದು ಬೆಳಕಿನ ವರ್ಷವೆಂದರೆ ೯.೪೬ ತ್ರಿಲಿಯನ್ ಕಿಲೋ ಮೀಟರ್ ಅಥವಾ ೫೮೫ ತ್ರಿಲಿಯನ್ ಮೈಲಿಗಳು. ಇದು ಆಗಾಧ ದೂರವೆನಿಸಿದರೂ, ಅಂತರ್  ಸೌರಮಂಡಲಗಳ ಪರಸ್ಪರ ದೂರದ ಲೆಕ್ಕದಲ್ಲಿ ಇದು ಬಹಳ ದೂರವೇನಲ್ಲ, ಎಂದು ಫ್ರಾನ್ಸಿನ ಸಿ.ಎನ್.ಆರ್.ಎಸ್ ಸಂಶೋಧನಾ ಕೇಂದ್ರದ ಖಗೋಳ ವಿಜ್ಞಾನಿ ಜೇವಿಯಾರ್ ಬೊನ್ ಪೈಲ್ ಹೇಳಿದ್ದಾರೆ.

ಈ ಹೊಸ ಗ್ರಹ ಭೂಮಿಗೆ ಸಮನಾದ ದ್ರವ್ಯ ರಾಶಿ ಹೊಂದಿದ್ದು, ಮೇಲ್ಮೈ ತಾಪಮಾನವೂ ಭೂಮಿಯ ತಾಪಮಾನಕ್ಕೆ ಹತ್ತಿರ ಹತ್ತಿರ ಇರುವುದರಿಂದ ಇದರಲ್ಲಿ ಜೀವಿಗಳಿಗೆ ಅಗತ್ಯವಾದ ದ್ರವರೂಪದಲ್ಲಿ ನೀರು ಇರುವ ಸಾಧ್ಯತೆ ಇದೆ ಎಂದು ಯೂರೊಪಿಯನ್ ಸದರನ್ ಅಬ್ಸವೆಟರಿ ಖಗೋಳ ತಜ್ಞರು ಹೇಳಿದ್ದಾರೆ.

ಮುಂದಿನ ಹಂತದ ಶೋಧನೆಯಲ್ಲಿ ಅಲ್ಲಿಯ ವಾತಾವರಣದಲ್ಲಿ ನೀರಿನ ಅಂಶಗಳು ಮತ್ತು ಮಿಥೈನ್ ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕಿದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.  ನೂತನ ಗ್ರಹ ೧೨೮ ಬಿ ಪ್ರತಿ ೯.೯ ದಿನಕ್ಕೆ ತನ್ನ ನಕ್ಷತ್ರದ ಸುತ್ತಲೂ ಒಂದು ಸುತ್ತು ಬರುತ್ತದೆ ಎಂದು ಜೀನೆವಾ ವಿಶ್ವ ವಿದ್ಯಾನಿಲಯದ ಗ್ರಹಗಳ ವೀಕ್ಷನಾಲಯದ ಖಗೋಳ ವಿಜ್ಞಾನಿ ನಿಕೋಲಾ ಅಸ್ಟ್ರುಬೀಲೊ ಹೇಳಿದ್ದಾರೆ.

ಈ ವರೆಗೆ ಸಾವಿರಾರು ಹೊಸ ಗ್ರಹಗಳನ್ನು ಪತ್ತೆ ಹಚ್ಚಲಾಗಿದೆ. ಅವುಗಳಲ್ಲಿ ಸುಮಾರು ೫೦ ಗ್ರಹಗಳಲ್ಲಿ ಯೋಗ್ಯ ವಾತವರಣ ಇರುವ ಸಂಭವವಿದೆ ಎನ್ನಲಾಗಿದೆ.  ಸೂರ್ಯನಿಂದ ಭೂಮಿ ಇರುವ ದೂರಕ್ಕಿಂತ, ೧೨೮ ಬಿ ಗ್ರಹ ತಾನು ಸುತ್ತುವ ನಕ್ಷತ್ರದಿಂದ ೨೦ ಪಟ್ಟು ಹತ್ತಿರದಲ್ಲಿದೆ. ಆದರೆ ಆ ನಕ್ಷತ್ರ ಹೆಚ್ಚು ಪ್ರಕಾಶಮಾನವಾಗಿಲ್ಲದೇ ತಂಪಾಗಿರುವುದರಿಂದ ಈ ಗ್ರಹ ಜೀವ ಪರಿಸರ, ತಾಪಮಾನ ಹೊಂದಿವೆ. ಹೀಗಾಗಿ ಈ ಗ್ರಹ ಅಧ್ಯಯನಕ್ಕೆ ಯೋಗ್ಯವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಉತ್ತನೂರು ವೆಂಕಟೇಶ್

Leave a Comment