ವಾಸ್ತವ್ಯ ಪ್ರಮಾಣಪತ್ರ; ಲಿಖಿತ ನಿರ್ಣಯವಿಲ್ಲದೆ ಆರೋಪ ಹೊರಿಸಿ ಮುಜುಗರಕ್ಕೀಡಾದ ಬಿಬಿಎಂಪಿ ಸದಸ್ಯರು

ಬೆಂಗಳೂರು, ಫೆ 11- ವಾಸ್ತವ್ಯ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪಾಲಿಕೆ ಸಭೆಯ ನಿರ್ಣಯಗಳನ್ನು  ಜಲಮಂಡಳಿ ಪಾಲಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಸದಸ್ಯರು, ಕೊನೆಗೆ ತಾವೇ ಮುಜುಗರಕ್ಕೀಡಾದ ಪರಿಸ್ಥಿತಿ ಎದುರಾಯಿತು.

30-40 ಹಾಗೂ 40-60 ಅಡಿ ವಿಸ್ತೀರ್ಣದ ಮನೆಗಳಿಗೆ ವಾಸ್ತವ್ಯ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಬಿಬಿಎಂಪಿ ಈ ಹಿಂದೆಯೇ ನಿರ್ಣಯ ಕೈಗೊಂಡಿದ್ದರೂ, ಪ್ರಮಾಣಪತ್ರವಿಲ್ಲದ ಮನೆಗಳಿಗೆ  ಜಲಮಂಡಳಿ ದಂಡ ವಿಧಿಸುತ್ತಿದೆ ಎಂದು ಮಾಜಿ ಮಹಾಪೌರರಾದ ಮಂಜುನಾಥ ರೆಡ್ಡಿ ಸಭೆಯ ವೇಳೆ ಆಕ್ಷೇಪಿಸಿದ್ದರು. ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದ್ದರು.

ಇದಕ್ಕೆ ಉತ್ತರಿಸಿದ ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಪಾಲಿಕೆಯ ನಿಯಮದ ಪ್ರಕಾರ 300 ಚದರ ಮೀಟರ್ ಕ್ಕಿಂತ ಹೆಚ್ಚಿನ ವಿಸ್ತೀರ್ಣದ ಮನೆಗೆ ವಾಸ್ತವ್ಯ ಪ್ರಮಾಣಪತ್ರ ಕಡ್ಡಾಯ. ಅದನ್ನು ಸಲ್ಲಿಸದ ಮನೆಗಳಿಗೆ ತಾತ್ಕಾಲಿಕ ನೀರು ಪೂರೈಕೆ ಮಾಡಿ ನೀರಿನ ದರದ ಶೇ.50ರಷ್ಟು ದಂಡ ವಿಧಿಸುತ್ತೇವೆ ಎಂದರು.

ಆಗ ಸದಸ್ಯರು ಮಧ್ಯಪ್ರವೇಶಿಸಿ, ಪಾಲಿಕೆ ನಿರ್ಣಯವನ್ನು ಬದಲಿಸಲಾಗಿದೆ. ಆದರೆ, ನೀವು ಅದನ್ನು ಪಾಲಿಸುತ್ತಿಲ್ಲ ಎಂದು ಗದ್ದಲ ಆರಂಭಿಸಿದರು. ಅದಕ್ಕೆ ಉತ್ತರಿಸಿದ ತುಷಾರ್ ಗಿರಿನಾಥ್‍, ಆ ಕುರಿತು ಲಿಖಿತ ನಿರ್ಣಯ ಕೈಗೊಂಡಿಲ್ಲ. ಬೇಕಿದ್ದರೆ ದಾಖಲೆಗಳನ್ನು ಪರಿಶೀಲಿಸಿ ಎಂದರು.

ಆಗ ತಮ್ಮ ತಪ್ಪನ್ನು ಅರಿತ ಸದಸ್ಯರು, ನಮ್ಮಿಂದ ತಪ್ಪಾಗಿದೆ. ಮುಂದಿನ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ಜನರಿಗೆ ದಂಡ ವಿಧಿಸಬೇಡಿ ಎಂದು ಮನವಿ  ಮಾಡಿದರು. ಆಗ ತುಷಾರ್, ಲಿಖಿತ ನಿರ್ಣಯ ದೊರೆತ ಮೇಲಷ್ಟೇ ಅದನ್ನು ಪಾಲಿಸಲು ಸಾಧ್ಯ ಎಂದು ಸ್ಪಷ್ಟಪಡಿಸಿದರು.

Leave a Comment