ವಾಸವಿ ಶಾಲೆ ಶಿಕ್ಷಕರಿಗೆ ಆಟೋಟ ಸ್ಪರ್ಧೆ

ಹುಳಿಯಾರು, ಸೆ. ೭- ಹುಳಿಯಾರಿನ ವಾಸವಿ ವಿದ್ಯಾ ಸಂಸ್ಥೆಯ ಶಿಕ್ಷಕರಿಗೆ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ನೀಡುವ ಮೂಲಕ ಪ್ರಸಕ್ತ ಸಾಲಿನ ಶಿಕ್ಷಕರ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಲಾಯಿತು.

ವಾಸವಿ ವಿದ್ಯಾ ಸಂಸ್ಥೆಯ ನಿರ್ದೇಶಕ ಹಾಗೂ ಆಟೋಟ ಸ್ಪರ್ಧೆಯ ಬಹುಮಾನದ ಪ್ರಾಯೋಜಕರಾದ ಬಿ.ವಿ. ಶ್ರೀನಿವಾಸ್ ಅವರು ಆಟೋಟ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಬೋಧನೆ ಕ್ರಿಯೆಯ ಜತೆಗೆ ಸಹಪಠ್ಯ ಚಟುವಟಿಕೆಯನ್ನು ಅಳವಡಿಸಿಕೊಂಡರೆ ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯೆ ಉತ್ತಮ ಬಾಂಧವ್ಯವೂ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಮಕ್ಕಳೊಂದಿಗೆ ಶಿಕ್ಷಕರೂ ಸಹ ಆಟೋಟದಲ್ಲಿ ಭಾಗವಹಿಸಬೇಕು ಎಂದರು.

ಶಿಕ್ಷಕಿ ಮಂಜುಳಾ ಮಾತನಾಡಿ, ಇಲ್ಲಿಯವರೆವಿಗೂ ತಾಲ್ಲೂಕು ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿತ್ತು. ಅಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕೆಲವು ಶಿಕ್ಷಕರಿಗೆ ಮಾತ್ರ ಸೀಮಿತವಾಗಿದ್ದು, ಅನೇಕ ಶಿಕ್ಷಕರನ್ನು ಹೇಳೋರು, ಕೇಳೋರು ಯಾರೂ ಇರುತ್ತಿರಲಿಲ್ಲ. ನಾವೆಲ್ಲವೂ ಸುಮ್ಮನೆ ಹೋಗಿ ಬರುವಂತ ದಿನಾಚರಣೆಯಾಗಿತ್ತು. ಆದರೆ ಈ ವರ್ಷದಿಂದ ಶಾಸಕರ ಸೂಚನೆಯ ಮೇರೆಗೆ ಆಯಾ ಶಾಲೆಗಳಲ್ಲೇ ಶಿಕ್ಷಕರ ದಿನಾಚರಣೆ ಆಚರಿಸುತ್ತಿರುವುದರಿಂದ ಆಟೋಟ ಸ್ಪರ್ಧೆ ಸಂಘಟಿಸಲಾಗಿದೆ. ಇದರಿಂದ ವರ್ಷ ಪೂರ್ತಿ ಬೋಧನೆಯಲ್ಲಿ ತೊಡಗಿರುವ ಶಿಕ್ಷಕರಿಗೆ ಎಂದೆಂದಿಗೂ ಮರೆಯದ ಮನ್ನೋಲ್ಲಾಸ ಲಭಿಸಿದೆ ಎಂದರು.

ಶಿಕ್ಷಕರಿಗೆ ಏಕ್ ಮಿನಿಟ್ ಮಾದರಿಯಲ್ಲಿ ವಾಟರ್ ಕಲೆಕ್ಟ್, ನಟ್ಟು ಜೋಡಿಸುವುದು, ಹಣೆಗೆ ಸ್ಟಿಕ್ಕರ್ ಅಂಟಿಸುವುದು ಸೇರಿದಂತೆ ಅನೇಕ ಆಟಗಳನ್ನು ಆಡಿಸಲಾಯಿತು. ಸ್ಪರ್ಧೆ ನಡೆಯುವಾಗ ವಿದ್ಯಾರ್ಥಿಗಳು ತಮ್ಮ ತರಗತಿ ಶಿಕ್ಷಕರ ಪರ ಕೂಗುತ್ತಾ ಪ್ರೋತ್ಸಾಹ ನೀಡುತ್ತಿದ್ದರು. ಶಿಕ್ಷಕರೂ ಸಹ ಲವಲವಿಕೆಯಿಂದ ಭಾಗವಹಿಸಿ ಮಕ್ಕಳಂತೆ ಕುಣಿದು ಕುಪ್ಪಳಿಸಿದರು. ಎಲ್ಲಾ ಸ್ಪರ್ಧೆಗಳಿಗೂ ಉತ್ಸುಕತೆಯಿಂದ ತಾ.. ಮುಂದು, ನಾ.. ಮುಂದು ಎಂದು ಭಾಗವಹಿಸಿದ್ದರು.

ಚಮಚ ಗೋಲಿ ಸ್ಪರ್ಧೆಯಲ್ಲಿ ಎಸ್.ಕವಿತಾ, ಮಂಜುಳಾ, ಬಾಲ್ ಪಾಸಿಂಗ್‍ನಲ್ಲಿ ಪ್ರಕಾಶ್, ಅಶ್ವತ್ಥ್, ರಾಮಸ್ವಾಮಿ, ದರ್ಶನ್, ಹಣೆಗೆ ಸ್ಟಿಕ್ಕರ್ ಅಂಟಿಸುವುದರಲ್ಲಿ ಮಮತಾ, ಎಚ್.ಜಿ. ಇಂದಿರಾ, ಬಲೂನ್ ಊದುವುದರಲ್ಲಿ ಪ್ರಕಾಶ್, ಸುಂದರ್, ದರ್ಶನ್, ಬಕೇಟ್ ಇನ್ ದ ಬಾಲ್‍ನಲ್ಲಿ ಜ್ಯೋತಿ, ಮಂಜುಳಾ, ಎಚ್.ಜಿ.ಇಂದಿರಾ, ನಟ್ಟು ಜೋಡಿಸುವುದರಲ್ಲಿ ಎಂ.ಎನ್.ಮಂಜುಳಾ, ಭಾಗ್ಯ, ವಾಟರ್ ಕಲೆಕ್ಟ್‌ನಲ್ಲಿ ಕೆ.ಆರ್.ಮಂಜುಳಾ, ಎಸ್.ಕವಿತಾ, ಕೆ.ಸಿ.ರಂಜಿತಾ, ಬೆಂಡ್ ಕಲೆಕ್ಟ್‌ನಲ್ಲಿ ಕೆ.ಆರ್.ಮಂಜುಳಾ, ಎಂ.ಎನ್.ಮಂಜುಳಾ, ಎಸ್.ಕವಿತಾ ಅವರು ಬಹುಮಾನ ಪಡೆದುಕೊಂಡರು.

ವಿಜೇತರಿಗೆ ಬಹುಮಾನ ಪ್ರಾಯೋಜಕ ಬಿ.ವಿ.ಶ್ರೀನಿವಾಸ್, ಗ್ರಾಹಕರ ವೇದಿಕೆಯ ಕಾರ್ಗಿಲ್ ಸತೀಶ್, ಸಮಾಜ ಸೇವಕ ಕೆ.ಸಿ.ಪಾಳ್ಯ ಉಮೇಶ್, ಮುಖ್ಯ ಶಿಕ್ಷಕ ಮಹೇಶ್, ಸುಧಾ, ವಿ.ನಾಗರಾಜು, ಟಿ.ನಾಗರಾಜು ಬಹುಮಾನ ವಿತರಿಸಿದರು.

Leave a Comment