ವಾಷಿಂಗ್ಟನ್ ಸುಂದರ್ ಪಾದಾರ್ಪಣೆ : ರೋಹಿತ್- ಧವನ್ ಶತಕದ ಜೊತೆಯಾಟ

ಮೊಹಾಲಿ, ಡಿ.೧೩: ಮೊದಲ ಪಂದ್ಯದ ಹೀನಾಯ ಸೋಲಿನ ಅವಮಾನದಿಂದ ಮೈಕೊಡವಿ ನಿಂತಿರುವ ಟೀಮ್ ಇಂಡಿಯಾ, ಎರಡನೇ ಏಕದಿನದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಟೂರ್ನಿಯಲ್ಲಿ ಎರಡನೆ ಬಾರಿಗೆ ಟಾಸ್ ಗೆದ್ದ ತಿಸಾರ ಪೆರಾರ ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದರು. ಮೊದಲ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಬೆದರಿಸಿದ್ದ ಹುಮ್ಮಸ್ಸಿನಲ್ಲೇ ಬೌಲಿಂಗ್ ದಾಳಿಗಿಳಿದ ಲಂಕಾ ಬೌಲರ್‌ಗಳಿಗೆ ನಿರಾಸೆ ಕಾದಿತ್ತು.

ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಸ್ಫೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿ, ಲಂಕಾ ವಿಕೆಟ್ ಬೇಟೆಗೆ ಬ್ರೇಕ್ ಹಾಕಿದರಲ್ಲದೇ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ೪೭ ಎಸೆತಗಳಲ್ಲಿ ೭ ಬೌಂಡರಿಗಳ ನೆರವಿನಿಂದ ಆಕರ್ಷಕ ಅರ್ಧ ಶತಕ ದಾಖಲಿಸಿದ ಧವನ್, ೬೭ ಎಸೆತಗಳಲ್ಲಿ ೬೮ ರನ್‌ಗಳಿಸಿದ್ದ ವೇಳೆ ಸಚಿತ್ ಪತಿರಣ ಬೌಲಿಂಗ್‌ನಲ್ಲಿ ಲಾಹಿರು ತಿರಿಮಾನ್ನೆಗೆ ಕ್ಯಾಚಿತ್ತು ನಿರ್ಗಮಿಸಿದರು.

ಮತ್ತೊಂದೆಡೆ ನಾಯಕನ ಜವಾಬ್ದಾರಿಯುತ ಆಟವಾಡುತ್ತಿರುವ ರೋಹಿತ್ ಶರ್ಮ, ೪ ಬೌಂಡರಿಗಳ ನೆರವಿನಿಂದ ೬೫ ಎಸೆತಗಳಲ್ಲಿ ಅರ್ಧ ಶತಕ ಪೂರೈಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಎರಡು ದ್ವಿಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್‌ಮನ್ ಎಂಬ ದಾಖಲೆ ಹೊಂದಿರುವ ರೋಹಿತ್ ಶರ್ಮಾ, ಧರ್ಮಶಾಲಾ ಅಂಗಳದಲ್ಲಿ ಕೇವಲ ಎರಡು ರನ್‌ಗಳಿಸಿ ಪೆವಿಲಿಯನ್ ಸೇರಿದ್ದರು.

ಅಲ್ಲದೆ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯಲು ವಿಫಲರಾಗಿದ್ದರು. ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ ಬಂದ ವರದಿ ಪ್ರಕಾರ ಭಾರತ ೨೬ ಓವರ್‌ಗಳಲ್ಲಿ ೧ ವಿಕೆಟ್ ನಷ್ಟದಲ್ಲಿ ೨೨೨ ರನ್‌ಗಳಿಸಿದ್ದು, ರೋಹಿತ್ ಜೊತೆಗೆ ೨೦ ರನ್‌ಗಳಿಸಿ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಧರ್ಮಶಾಲಾ ಪಂದ್ಯದ ಅಮೋಘ ಗೆಲುವಿನ ಹುಮ್ಮಸ್ಸಿನಲ್ಲಿರುವ ಲಂಕಾ ಎರಡನೇ ಪಂದ್ಯಕ್ಕೂ ಅದೇ ತಂಡವನ್ನು ಉಳಿಸಿಕೊಂಡಿದೆ. ಮತ್ತೊಂದೆಡೆ ಟೀಮ್ ಇಂಡಿಯಾ ಕುಲ್‌ದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್‌ಗೆ ಸ್ಥಾನ ನೀಡಿದೆ. ೧೮ ವರ್ಷ ಪ್ರಾಯದ ಸುಂದರ್‌ಗೆ ಇದು ಚೊಚ್ಚಲ ಪಂದ್ಯವಾಗಿದ್ದು, ಭಾರತದ ಪರ ಪಾದಾರ್ಪಣಾ ಪಂದ್ಯವನ್ನಾಡುತ್ತಿರುವ ೭ನೇ ಕಿರಿಯ ಅಟಗಾರ ಎಂಬ ಕೀರ್ತಿಗೂ ಸುಂದರ್ ಪಾತ್ರರಾಗಿದ್ದಾರೆ.

ಬ್ಯಾಟ್ಸ್‌ಮನ್‌ಗಳ ಕಳಪೆ ಸಾಧನೆಯ ನಡುವೆಯೂ ಅಜಿಂಕ್ಯಾ ರಹಾನೆ ಎರಡನೇ ಪಂದ್ಯದಲ್ಲೂ ಸ್ಥಾನ ಗಳಿಸಿಲು ವಿಫಲರಾಗಿದ್ದಾರೆ. ೨೦೧೧ರ ವಿಶ್ವಕಪ್ ಬಳಿಕ ಮೊಹಾಲಿಯಲ್ಲಿ ನಡೆದಿರುವ ನಾಲ್ಕು ಏಕದಿನ ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ್ದ ತಂಡವೇ ಜಯಗಳಿಸಿದ ದಾಖಲೆ ಹೊಂದಿದೆ. ಈ ದಾಖಲೆಯನ್ನು ಲಂಕಾ ಮುಂದುವರಿಸಿದ್ದೇ ಆದಲ್ಲಿ ಅದು ಸರಣಿಯನ್ನೇ ಗೆದ್ದ ಐತಿಹಾಸಿಕ ಸಾಧನೆಯಾಗಲಿದೆ. ಮತ್ತೊಂದೆಡೆ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಸೋತಿರುವ ಭಾರತಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆಲುವು ಅನಿವಾರ್ಯವಾಗಿದೆ.

Leave a Comment