ವಾಲ್ಮೀಕಿ ಸಮಾಜ ಸಂಘಟನೆ ಬಲಾಬಲ ಪ್ರದರ್ಶಿಸಲು ಅಲ್ಲ

ಪಿರಿಯಾಪಟ್ಟಣ: ಡಿ.3- ವಾಲ್ಮೀಕಿ ಸಮಾಜದ ಸಂಘಟನೆ ಹಾಗೂ ಹೋರಾಟ ಯಾವುದೇ ಜಾತಿ ಜನಾಂಗದ ಮೇಲೆ ಬಲಾಬಲವನ್ನು ಪ್ರದರ್ಶಿಸಲು ಅಲ್ಲ ಎಂದು ರಾಜನಹಳ್ಳಿ ವಾಲ್ಮೀಕಿ ಮಠದ ಪೀಠಾಧ್ಯಕ್ಷ ಶ್ರೀ ಪ್ರಸನ್ನ ನಂದಪುರಿ ಸ್ವಾಮೀಜಿ ತಿಳಿಸಿದರು.
ಪಿರಿಯಾಪಟ್ಟಣದಲ್ಲಿ  ನೂತನವಾಗಿ ನಿರ್ಮಾಣ ನಿರ್ಮಾಣಗೊಳ್ಳುತ್ತಿರುವ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಬಳಿಕ ರಾಜನಹಳ್ಳಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸುಮಾರು 45 ರಿಂದ 50 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ವಾಲ್ಮೀಕಿ ಸಮಾಜದ ಜನರು ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ವಾಲ್ಮೀಕಿ ಸಮಾಜದ ಸುಧಾರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು. ವಾಲ್ಮೀಕಿ ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು.
ಫೆಬ್ರವರಿ 8 ಮತ್ತು 9 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಲಿದ್ದು ವಾಲ್ಮೀಕಿ ಸಮಾಜದ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದರು. ಜಾತ್ರಾ ಮಹೋತ್ಸವದ ಯಶಸ್ಸಿಗಾಗಿ  ರಾಜ್ಯದಾದ್ಯಂತ 150 ಕ್ಕೂ ಹೆಚ್ಚಿನ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ ಸಮಾಜದ ಜನರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಪಿರಿಯಾಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿ ಸುಮಾರು ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದು ಈ ಬಗ್ಗೆ ಸಮಾಜದ ಜನಪ್ರತಿನಿಧಿಗಳು ಹೆಚ್ಚಿನ ಗಮನ ಹರಿಸಿ ಅನುದಾನ ತರುವ ಪ್ರಯತ್ನ ಮಾಡುವಂತೆ ಸಲಹೆ ನೀಡಿದರು . ಉತ್ತಮ ಗುಣಮಟ್ಟದ ಸುಸಜ್ಜಿತ ಸಮುದಾಯ ಭವನವನ್ನು ನಿರ್ಮಿಸಿದಲ್ಲಿ ಶುಭ ಸಮಾರಂಭಗಳಿಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕೃಷಿ ವಿಭಾಗದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಪಟ್ಟಣದ  ಡಿಪಿಬಿಎಸ್ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಜೆ.ಜೆ. ಅಶೋಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಪುಟ್ಟಯ್ಯ, ಉಪಾಧ್ಯಕ್ಷ ರಾಮಚಂದ್ರ, ಖಜಾಂಚಿ ಪಿ.ಎಸ್.ಹರೀಶ್, ಜಿಲ್ಲಾಧ್ಯಕ್ಷ ಶ್ರೀಧರ ನಾಯ್ಕ, ಜಿಪಂ ಸದಸ್ಯ ಕೆ.ಸಿ.ಜಯಕುಮಾರ್, ತಾಪಂ ಸದಸ್ಯ ಮೋಹನ್ ರಾಜ್,  ಮುಖಂಡರಾದ ಹರಿಪ್ರಿಯಾ ಕುಮಾರ್, ಎಂ.ಕೆ.ಪ್ರಕಾಶ್, ರವಿ, ಶಿವಣ್ಣ ಚೆಲುವರಾಯಿ, ತಿಮ್ಮ ನಾಯ್ಕ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment