ವಾಲ್ಮೀಕಿ ಭವನ ಕಾಮಗಾರಿ ಆರಂಭಕ್ಕೆ ಒತ್ತಾಯ

ಕೊರಟಗೆರೆ, ಸೆ. ೧೪- ಪಟ್ಟಣಕ್ಕೆ 1.5 ಕೋಟಿ ರೂ.ಗಳ ವಾಲ್ಮೀಕಿ ಭವನ ಮಂಜೂರಾಗಿ 6 ವರ್ಷಗಳಾದರೂ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರ ಕಾಮಗಾರಿ ಪ್ರಾರಂಭಿಸದೆ ತಾಲ್ಲೂಕಿನ ನಾಯಕ ಸಮುದಾಯದ ಬಗ್ಗೆ ಹಾಗೂ ಮಹರ್ಷಿ ವಾಲ್ಮೀಕಿ ಬಗ್ಗೆ ತಾತ್ಸಾರ ತಾಳಿರುವುದು ನಾಯಕ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಪ.ಪಂ. ಸದಸ್ಯ ಕೆ.ಆರ್. ಓಬಳರಾಜು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೊರಟಗೆರೆ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡ ಬ್ಲಾಕ್ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನಾಯಕ ಸಮುದಾಯವು ಶೋಷಿತ ಸಮುದಾಯವಾಗಿದ್ದು, ಜನಾಂಗದ ಅಭಿವೃದ್ಧಿಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ರೂಪಿಸಿ ಮಂಜೂರು ಮಾಡಿದ್ದರೂ ಅದನ್ನು ಅಧಿಕಾರಿಗಳು ಜಾರಿಗೆ ತರದೆ ಇರುವುದಕ್ಕೆ ಪ್ರತ್ಯಕ್ಷ ಸಾಕ್ಷಿ 6 ವರ್ಷಗಳಿಂದ ಪಟ್ಟಣದಲ್ಲಿ ನಿರ್ಮಾಣವಾಗದೆ ನೆನೆಗುದಿಗೆ ಬಿದ್ದಿರುವ ವಾಲ್ಮೀಕಿ ಸಮುದಾಯ ಭವನವಾಗಿದೆ ಎಂದರು.
ಈ ಸಮುದಾಯ ಭವನ ನಿರ್ಮಾಣಕ್ಕೆ ಹಿಂದೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಶಾಸಕರಾಗಿದ್ದ ಸಂದರ್ಭಧಲ್ಲಿ 1.5 ಕೋಟಿ ರೂ ಮಂಜೂರು ಮಾಡಿಸಿದ್ದರು. ಆದರೆ ಇದನ್ನು ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರದವರು ಸತತ 6 ವರ್ಷಗಳಿಂದ ಕಟ್ಟಡವನ್ನು ನಿರ್ಮಾಣ ಮಾಡದೆ ಬೇಜವಾಬ್ದಾರಿ ತೋರಿಸಿದ್ದಾರೆ. ಈ ಘಟನೆ ಇಲಾಖೆಯು ಶೋಷಿತ ಸಮುದಾಯಗಳಿಗೆ ಮಾಡುತ್ತಿರುವ ಅಪಮಾನವಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಇದರ ಬಗ್ಗೆ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.

ನಾಯಕ ಸಮುದಾಯವನ್ನು ಸಾಮಾಜಿಕ ಹಾಗೂ ಶೈಕ್ಷಣಿಕ, ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದು, ಕೊರಟಗೆರೆ ಪಟ್ಟಣದಲ್ಲಿ ಪ.ಪಂ. ಚುನಾವಣೆಯಲ್ಲಿ ಗೆಲ್ಲುವಂತಹ ಸಮುದಾಯದ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಸಹ ಟಿಕೆಟ್ ವಂಚಿತರಾಗಿ ಸಮುದಾಯದ ಜನರು ಹೆಚ್ಚು ಮಂದಿ ಗೆಲ್ಲಲು ಸಾಧ್ಯವಾಗಲಿಲ್ಲ. ಇತರ ಪಕ್ಷಗಳಲ್ಲಿ ಆ ರೀತಿ ಆಗದ ಕಾರಣ ಸಮುದಾಯದ ಹೆಚ್ಚು ಅಭ್ಯರ್ಥಿಗಳು ಗೆಲ್ಲುವಂತಾಯಿತು. ಈ ಬಗ್ಗೆ ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತರಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಎಸ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಜಿಲ್ಲಾ ಎಸ್ಟಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕಿರಣ್‍ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕವಿತಾ, ಮಾಜಿ ಪ.ಪಂ.ಸದಸ್ಯರುಗಳಾದ ಲಾರಿಸಿದ್ದಪ್ಪ, ನರಸಿಂಹಮೂರ್ತಿ ಮುಖಂಡರುಗಳಾದ ನರಸಪ್ಪ, ದಿನ್ನೆಪಾಳ್ಯ ನಾರಾಯಣ್, ಕುಮಾರ್, ರಂಗಸ್ವಾಮಿ, ರಾಜಣ್ಣ, ಕಾರ್ ಮಹೇಶ್, ಧರ್ಮೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Comment