ವಾಲ್ಮೀಕಿ ನಾಯಕರ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ: ಕಾರು ಮಹೇಶ್

ಕೊರಟಗೆರೆ, ಜೂ. ೫- ಸಹಕಾರ ಕ್ಷೇತ್ರದಲ್ಲಿ ರೈತರ ರಕ್ಷಣೆಗೆ ನಿಂತಿರುವ ಸಹಕಾರಿ ರತ್ನ ಮತ್ತು ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ರಾಜಣ್ಣನವರ ಬಗ್ಗೆ ಮಾತನಾಡುವ ನೈತಿಕತೆ ಮತ್ತು ಯೋಗ್ಯತೆ ಜಿ.ಪಂ. ಸದಸ್ಯ ನಾರಾಯಣಮೂರ್ತಿಗೆ ಇಲ್ಲ ಎಂದು ವಾಲ್ಮೀಕಿ ಸಮುದಾಯದ ಮುಖಂಡ ಕಾರು ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಬೈಲಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹುಟ್ಟಿನಿಂದಲೇ ಹೋರಾಟಗಾರ. ಬಡವರು, ದಲಿತರು, ಹಿಂದುಳಿದ ವರ್ಗ ಸೇರಿದಂತೆ ತುಮಕೂರು ಜಿಲ್ಲೆಯ ರೈತರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದ್ದಾರೆ. ರಾಜ್ಯದ ಡಿಸಿಎಂ ಪರಮೇಶ್ವರ್ ಮತ್ತು ಮತ್ತು ರಾಜಣ್ಣ ಉತ್ತಮ ಸ್ನೇಹಿತರಾಗಿದ್ದಾರೆ. ಪರಮೇಶ್ವರ್ ಜತೆಯಲ್ಲಿ ಇರುವ ನಾರಾಯಣಮೂರ್ತಿ ವಿನಾ ಕಾರಣ ಸಮುದಾಯದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಾಲ್ಮೀಕಿ ಸಮುದಾಯದ ಮುಖಂಡ ಶಶಿಕುಮಾರ್ ಮಾತನಾಡಿ, ರಾಜಣ್ಣನವರ ಎಡಗಾಲಿಗೂ ಸಮವಿಲ್ಲದ ನಾರಾಯಣಮೂರ್ತಿ ವಾಲ್ಮೀಕಿ ಸಮುದಾಯವನ್ನು ಕೆರಳುವಂತೆ ಮಾಡಿದ್ದಾರೆ. ಧೈರ್ಯವಿದ್ದರೆ ಜಿ.ಪಂ. ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಸ್ಪರ್ಧಿಸಲಿ, ಸಮುದಾಯದ ಶಕ್ತಿ ಏನೆಂದು ನಾವು ತೋರಿಸುತ್ತೇವೆ ಎಂದು ಸವಾಲು ಹಾಕಿದರು.

ಪ.ಪಂ. ಸದಸ್ಯ ಗಣೇಶ್ ಮಾತನಾಡಿ, ರೈತರಿಗೆ ಮತ್ತು ಮಹಿಳೆಯರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಿ ಸ್ವಾವಲಂಬಿ ಬದುಕು ರೂಪಿಸಿಕೊಟ್ಟ ರಾಜಣ್ಣನವರು ಲಕ್ಷಾಂತರ ಜನರಿಗೆ ದಾರಿದೀಪವಾಗಿದ್ದಾರೆ. ಕೊರಟಗೆರೆ ಕ್ಷೇತ್ರದಲ್ಲಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸವನ್ನು ನಾರಾಯಣಮೂರ್ತಿ ಮಾಡಿದ್ದು, ಹೊಳವನಹಳ್ಳಿ ಜಿ.ಪಂ. ಕ್ಷೇತ್ರಕ್ಕೆ ಅವರ ಅನುದಾನ ಶೂನ್ಯವಾಗಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಪ.ಪಂ. ಸದಸ್ಯ ಪುಟ್ಟನರಸಯ್ಯ, ಮಾಜಿ ಸದಸ್ಯರಾದ ಲಾರಿ ಸಿದ್ದಪ್ಪ, ಮುಖಂಡರಾದ ರಮೇಶ್, ಶಶಿಧರ್, ರಮೇಶ್, ಸಿದ್ದಲಿಂಗಯ್ಯ, ಕೆಂಪರಾಜು, ಕೋಟೆರಂಗನಾಥ್, ಓಬಳೇಶ್, ಗಂಗಣ್ಣ, ಪಾಂಡುರಂಗಪ್ಪ, ಮಂಜುನಾಥ್, ಪುಟ್ಟಕಾಮಯ್ಯ, ಶಿವಣ್ಣ, ಚಲಪತಿ, ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Comment