ವಾಲಿದ ಕಟ್ಟಡ, ಮಾಲೀಕ, ಗುತ್ತಿಗೆದಾರನ ಬಂಧನ

ಬೆಂಗಳೂರು, ಡಿ. ೭- ಬಿಬಿಎಂಪಿ ಬೈಲಾವನ್ನು ಉಲ್ಲಂಘಿಸಿ, ಮಾರತ್ತಹಳ್ಳಿ ವಾರ್ಡ್‌ನ ಅಶ್ವತ್ ನಗರದಲ್ಲಿ ಕಟ್ಟಲಾಗಿದ್ದ 4 ಅಂತಸ್ತಿನ ಕಟ್ಟಡ.ವೊಂದು ದಿಢೀರನೆ ವಾಲಿಕೊಂಡಿದ್ದರ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ.
4 ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ ಕಟ್ಟಡದ ಮಾಲೀಕ ಶಿವಪ್ರಸಾದ್ ಮತ್ತು ಗುತ್ತಿಗೆದಾರ ವೆಂಕಟೇಶಪ್ಪ ಅವರನ್ನು ಹೆಚ್ಎ‌ಎಲ್ ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ನಿಯಮದ ಪ್ರಕಾರ 1+2 ಸೇರಿದಂತೆ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲು ಮಾತ್ರ ಅವಕಾಶವಿದೆ. ಆದರೆ ಕಟ್ಟಡದ ಮಾಲೀಕರು ಮೂರು ತಿಂಗಳ ಹಿಂದೆ ನಿಯಮವನ್ನು ಉಲ್ಲಂಘಿಸಿ 4 ಅಂತಸ್ತಿನ ಕಟ್ಟಡ ನಿರ್ಮಿಸಿ, ಪಿಜಿ ನಡೆಸುತ್ತಿದ್ದರು.
4 ಅಂತಸ್ತಿನ ಕಟ್ಟಡದಲ್ಲಿ ನಿನ್ನೆ ಇದ್ದಕ್ಕಿಂತ ಪಿಲ್ಲರ್ ಬಿರುಕು ಬಿಟ್ಟ ಪರಿಣಾಮ ಕಟ್ಟಡ ವಾಲಿಕೊಂಡು ಕುಸಿದು ಬೀಳುವ ಹಂತ ತಲುಪಿದ್ದು ಕೂಡಲೇ ಮುಂಜಾಗರೂಕತೆ ಕ್ರಮವಾಗಿ ಕಟ್ಟಡದಲ್ಲಿರುವ ನಿವಾಸಿಗಳು ಮತ್ತು ಅಕ್ಕ-ಪಕ್ಕದಲ್ಲಿರುವ ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಇಂದು ಬೆಳಿಗ್ಗೆ ಕಟ್ಟಡವನ್ನು ಕೆಡವಿ ಹಾಕುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಇಂದಿನಿಂದ ಮೂರು ದಿನಗಳವರೆಗೆ ನೆಲಸಮ ಕಾರ್ಯಾಚರಣೆ ನಡೆಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಕಟ್ಟಡ ದಿಢೀರನೆ ವಾಲುತ್ತಿದ್ದ ಮಾಹಿತಿಯನ್ನು ಪಡೆದ ಪಾಲಿಕೆ ಸದಸ್ಯ ರಮೇಶ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
4 ಅಂತಸ್ತಿನ ಕಟ್ಟಡ ವಾಲಿರುವುದನ್ನು ನೋಡಲು ಸಾವಿರಾರು ಜನ ಜಮಾಯಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ನೆಲಸಮ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಜನರನ್ನು ಅಲ್ಲಿಂದ ಚದುರಿಸಲಾಯಿತು.
ಹೆಚ್ ಎ ಎಲ್ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

Leave a Comment