ವಾರ್ನರ್, ಸ್ಮಿತ್ ಮರಳುವಿಕೆಯಿಂದ ಸಮಸ್ಯೆ ಇಲ್ಲ: ಫಿಂಚ್

ದುಬೈ, ಏ 16 – ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಅವರು ರಾಷ್ಟ್ರೀಯ ತಂಡಕ್ಕೆ ಮರಳಿರುವುದರಿಂದ ಯಾವುದೇ ಸಮಸ್ಯೆ ಇಲ್ಲವೆಂದು ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಸ್ಪಷ್ಟಪಡಿಸಿದ್ದಾರೆ.

ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿದ್ದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಅವರಿಗೆ ಮುಂಬರುವ ಐಸಿಸಿ ವಿಶ್ವಕಪ್ ಆಸ್ಟ್ರೇಲಿಯಾ ತಂಡದಲ್ಲಿ ಮರಳಿ ಸ್ಥಾನ ಕಲ್ಪಿಸಲಾಗಿದೆ. ವಿಶ್ವಕಪ್ ಆಸೀಸ್ ತಂಡವನ್ನು ಏ.15 ರಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿತ್ತು.

 ಇಂಗ್ಲೆಂಡ್‌ನಲ್ಲಿ ಮೇ 30 ರಿಂದ ವಿಶ್ವಕಪ್ ಆರಂಭಗೊಂಡು ಜುಲೈ 14ರವರೆಗೆ ನಡೆಯಲಿದೆ. ಜೂನ್. 1 ರಂದು ಆಸೀಸ್, ಅಫ್ಘಾನಿಸ್ತಾನ್ ವಿರುದ್ಧ, ಮೊದಲ ಪಂದ್ಯ ಆಡುವುದಕ್ಕೂ ಮುನ್ನ, ಇಂಗ್ಲೆಂಡ್ ಹಾಗೂ ಶ್ರೀಲಂಕಾ ವಿರುದ್ಧ ಅಭ್ಯಾಸ ಪಂದ್ಯವಾಡಲಿದೆ.

“ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಅವರ ಮರಳುವಿಕೆಯಿಂದ ತಂಡಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಇವರಿಬ್ಬರೂ ತಂಡದಲ್ಲಿದ್ದರೆ ಡ್ರೆಸ್ಸಿಂಗ್ ಕೊಠಡಿಯಲ್ಲಿ ಒಳ್ಳೆಯ ವಾತಾವರಣ ನೆಲೆಯೂರುತ್ತದೆ. ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಇಬ್ಬರು ವೈಯಕ್ತಿವಾಗಿ ತುಂಬಾ ಒಳ್ಳೆಯವರು. ಅವರಿಬ್ಬರ ಬಗ್ಗೆ ಇದುವರೆಗೂ ಯಾವುದೇ ಸಮಸ್ಯೆ ಇಲ್ಲ.” ಎಂದು ಸ್ಪಷ್ಟಪಡಿಸಿದರು.

ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್ ಸ್ಮಿತ್ ತಂಡದಿಂದ ನಿರ್ಗಮಿಸಿದ ನಂತರ, ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವವನ್ನು ಟಿಮ್ ಪೈನ್‌ಗೆ ಹಾಗೂ ನಿಗದಿತ ಓವರ್‌ಗಳ ತಂಡದ ನಾಯಕತ್ವವನ್ನು ಆ್ಯರೋನ್ ಫಿಂಚ್‌ಗೆ ವಹಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಫಿಂಚ್ ನಾಯಕತ್ವದ ಆಸೀಸ್ ತಂಡ ಸತತ ವೈಫಲ್ಯ ಅನುಭವಿಸಿತ್ತು. ಆದರೆ, ಭಾರತದ ವಿರುದ್ಧ ಹಾಗೂ ಪಾಕಿಸ್ತಾನದ ಎರಡು ಏಕದಿನ ಸರಣಿಗಳನ್ನು ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.

 

Leave a Comment