ವಾರ್ಡ್ 11 : ಬೇರೂನ್ ಕಿಲ್ಲಾ ಖೊಟ್ಟಿ ಮತದಾರರನ್ನು  ರದ್ದುಗೊಳಿಸಲು ತಹಶೀಲ್ದಾರರಿಗೆ ಜಿಲ್ಲಾಡಳಿತ ಆದೇಶ

ರಾಯಚೂರು.ಆ.29- ನಗರದ ವಾರ್ಡ್ 11 ಬೇರೂನ್ ಕಿಲ್ಲಾದಲ್ಲಿ ಸುಮಾರು 670 ಅಧಿಕ ಬೋಗಸ್ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಇವುಗಳನ್ನು ರದ್ದುಪಡಿಸುವಂತೆ ಜಿಲ್ಲಾಡಳಿತ ತಹಶೀಲ್ದಾರರಿಗೆ ಆದೇಶ ನೀಡಿ 12 ಗಂಟೆ ಗತಿಸಿದರೂ, ಇನ್ನೂವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಈ ವಾರ್ಡ್ ಅಭ್ಯರ್ಥಿಗಳು ಆತಂಕಕ್ಕೆ ಗುರಿ ಮಾಡಿದೆ.
ವಾರ್ಡಿನ ಖೊಟ್ಟಿ ಮತಗಳ ರದ್ದಿಗೆ ಸಂಬಂಧಿಸಿ ಗಣಪತ್ ಎಸ್. ಜಹಾಂಗೀರ್ ಎಂಬುವವರು ಆ.28 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಈ ದೂರನ್ನು ಸ್ವೀಕರಿಸಿ ಅದೇ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರವನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮುಂದಿನ ಕ್ರಮಕ್ಕೆ ಸಲ್ಲಿಸಿತ್ತು. ಈ ಪತ್ರವನ್ನಾಧರಿಸಿ ಜಿಲ್ಲಾಧಿಕಾರಿ ಕಛೇರಿಯ ಅಪರ ಜಿಲ್ಲಾಧಿಕಾರಿಗಳು, ತಹಶೀಲ್ದಾರರಿಗೆ ಮತ್ತು ಆ.28 ರಂದು ಮತ್ತೊಂದು ಪತ್ರ ಬರೆದು ಖೊಟ್ಟಿ ಮತ ರದ್ದಿಗೆ ಸಂಬಂಧಿಸಿ ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಿದ್ದರು.
ಒಂದೇ ದಿನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಡಳಿತದಿಂದ ತುರ್ತು ಕ್ರಮದ ಆಧಾರದ ಮೇಲೆ ಖೊಟ್ಟಿ ಮತ ರದ್ದಿಗೆ ಸಂಬಂಧಿಸಿ ಕ್ರಮಕ್ಕೆ ಸೂಚಿಸಲಾಗಿತ್ತು. 12 ಗಂಟೆ ಗತಿಸಿದರೂ, ತಹಶೀಲ್ ಕಛೇರಿಯಿಂದ ಇನ್ನೂವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಗಮನಾರ್ಹವಾಗಿದೆ. ಈ ಹಿಂದೆ ನಾಗರಾಜ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಮಂಜುಶ್ರೀ ಅವರು, ಖೊಟ್ಟಿ ಮತ ರದ್ದು ಪಡಿಸಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದರು.
ಆದರೆ, ಈಗ ಪೊಲೀಸ್ ಇಲಾಖೆ, ಜಿಲ್ಲಾಡಳಿತದಿಂದ ಖೊಟ್ಟಿ ಮತ ರದ್ದಿಗೆ ಸ್ಪಷ್ಟ ಆದೇಶವಿದ್ದರೂ, ತಹಶೀಲ್ ಕಛೇರಿಯಿಂದ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ಭಾರೀ ಅನುಮಾನಕ್ಕೆಡೆಯಾಗುವಂತೆ ಮಾಡಿದೆ. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಈ ಪ್ರಕರಣ ಗಂಭೀರ ಪರಿಗಣಿಸಿ, ಮಂಜುಶ್ರೀ ಅವರ ಅಧಿಕಾರ ಅವಧಿ ಮಾದರಿಯಲ್ಲಿ ಕ್ರಮಕೈಗೊಳ್ಳಬೇಕೆಂದು ಅಲ್ಲಿಯ ಮತದಾರರು ಮತ್ತು ಅಭ್ಯರ್ಥಿಗಳ ಆಪೇಕ್ಷೆಯಾಗಿದೆ. ಆದರೆ, ಇನ್ನುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಖೊಟ್ಟಿ ಮತದಾನಕ್ಕೆ ಅವಕಾಶ ನೀಡಲು ಸ್ಥಳೀಯ ಆಡಳಿತವೇ ನೆರವಾಗುತ್ತಿದೆಯೇ ಎನ್ನುವ ಭಾವನೆ ಮೂಡುವಂತೆ ಮಾಡಿದೆ.
ಆ.14 ರಂದು ಈ ಕುರಿತು ದಾಖಲೆಯ ಸಮೇತ ವರದಿಯೊಂದನ್ನು ಸಂಜೆವಾಣಿ ಪ್ರಕಟಿಸಲಾಗಿತ್ತು. 3-10-120/8ರ ವಿಳಾಸದಲ್ಲಿ 3-10-120ಎ ಎಂದು ಮನೆ ನಂ.ದಾಖಲಿಸಿ ಖೊಟ್ಟಿ ಮತದಾರರ ಹೆಸರು ದಾಖಲಿಸಲಾಗಿದೆಂದು ದೂರಲಾಗಿದೆ. ಮಹ್ಮದ್ ಫಾರೂಕ್ ಅಹ್ಮದ್ ರಶೀದ್ ಬೇಗಂ ಎನ್ನುವವರ ಹೆಸರು ಉಲ್ಲೇಖಿಸಲಾಗಿದೆ. ಇದೇ ರೀತಿ ಗೋಧಾಮವೊಂದರಲ್ಲಿಯೂ ಮನೆ ನಂ.ದಾಖಲಿಸಿ, ಬೋಗಸ್ ಮತದಾರರನ್ನು ಸೇರಿಸಲಾಗಿದೆಂದು ಮತದಾರರ ಯಾದಿಯೊಂದಿಗೆ ದೂರು ದಾಖಲಿಸಲಾಗಿದೆ.
ಎಲ್ಲಾ ದಾಖಲೆಗಳು ಸಾಕ್ಷಿಯಾಗಿವೆ. ಮತ್ತು ಜಿಲ್ಲಾಡಳಿತ ಕಛೇರಿಯಿಂದ ನಕಲಿ ಮತ ರದ್ದಿಗೆ ಸೂಚಿಸಲಾಗಿದ್ದರೂ, ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಾರ್ಡ್ ಪರಿಸ್ಥಿತಿ ಗಂಭೀರಗೊಳ್ಳುವಂತೆ ಮಾಡಿದೆ. ಚುನಾವಣೆ ಅಕ್ರಮಮುಕ್ತ ನಡೆಯಬೇಕೆಂದು ಸ್ಪಷ್ಟವಾಗಿ ಆಯೋಗ ಸೂಚಿಸಿದ್ದರೂ, ಈ ಬಗ್ಗೆ ಕೆಳ ಮಟ್ಟದಲ್ಲಿ ತುರ್ತು ಕಾರ್ಯ ನಡೆಯುತ್ತಿಲ್ಲ ಎನ್ನುವ ಭಾವನೆ ವಾರ್ಡ್ ಮತದಾರರಲ್ಲಿ ಮೂಡುವಂತೆ ಮಾಡಿದೆ.
ಪ್ರಾದೇಶಿಕ ಆಯುಕ್ತರು ನಗರದಲ್ಲಿ ಇಂದು ಕಂದಾಯ ಅಧಿಕಾರಿಗಳ ಸಭೆ ಕೈಗೊಂಡಿದ್ದು, ಈ ಸಮಸ್ಯೆ ಬಗ್ಗೆ ಅವರು ಗಮನಿಸಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸುವ ಅಗತ್ಯವಿದೆ. ಈ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ, ಚುನಾವಣೆ ಸಂದರ್ಭದಲ್ಲಿ ಅನಗತ್ಯ ಕಲಹಕ್ಕೆ ಈ ಖೊಟ್ಟಿ ಮತದಾರರ ವಿವಾದ ದಾರಿಯಾಗುವ ಸಾಧ್ಯತೆಗಳಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರಾಗಬೇಕಾಗುತ್ತದೆಂದು ಅಲ್ಲಿಯ ನೈಜ ಮತದಾರರ ಅಭಿಪ್ರಾಯವಾಗಿದೆ.

Leave a Comment