ವಾರಾಹಿ ನೀರು ಪೂರೈಸುವ ಯೋಜನೆಯ ಅಡೆತಡೆ ನಿವಾರಣೆ

ಉಡುಪಿ, ಜೂ.೧- ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಉಡುಪಿ ನಗರಕ್ಕೆ ವಾರಾಹಿಯಿಂದ ನೀರು ಪೂರೈಕೆ ಮಾಡುವ ಸುಮಾರು ೨೮೨ ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷೆಯ ಯೋಜನೆಗೆ ಎದುರಾಗಿದ್ದ ಅಡೆತಡೆಗಳು ಬೆಂಗಳೂರಿನಲ್ಲಿ ಇಂದು ನಡೆದ ವಿಧಾನ ಪರಿಷತ್ತಿನ ಅರ್ಜಿ ಸಮಿತಿ ಸಭೆಯಲ್ಲಿ ನಿವಾರಣೆಯಾಗಿದ್ದು, ಮರುಟೆಂಡರ್ ಕರೆದು ತಕ್ಷಣ ಕಾಮಗಾರಿಯನ್ನು ಆರಂಭಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.
ವಿಧಾನ ಪರಿಷತ್ ಮಾಜಿ ಉಪಸಭಾಪತಿ ಹಾಗೂ ಅರ್ಜಿ ಸಮಿತಿ ಅಧ್ಯಕ್ಷ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

ಈ ಹಿಂದಿನ ಯೋಜನೆಯಂತೆ ವಾರಾಹಿಯಿಂದ ಶುದ್ಧೀಕರಿಸದ ನೀರನ್ನು ಪೈಪ್ ಮೂಲಕ ಬಜೆಯಲ್ಲಿ ಈಗಾಗಲೇ ಇರುವ ಶುದ್ಧೀಕರಣ ಘಟಕಕ್ಕೆ ತಂದು, ಅಲ್ಲಿ ಶುದ್ಧೀಕರಿಸಿ ನೀರನ್ನು ಮಣಿಪಾಲಕ್ಕೆ ಕೊಂಡೊಯ್ಯುವಬೇಕಾಗಿತ್ತು. ಆದರೆ ಇದಕ್ಕೆ ರೈತ ಸಂಘ ಅರ್ಜಿ ಸಮಿತಿಗೆ ಆಕ್ಷೇಪಣೆ ಸಲ್ಲಿಸಿತ್ತು. ಈ ಆಕ್ಷೇಪದಂತೆ ಸಮಿತಿಯು ಟೆಂಡರಿಗೆ ತಡೆಯೊಡ್ಡಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಇಂದು ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆ ಪ್ರಕಾರ ವಾರಾಹಿಯ ಭರತ್ಕಲ್ ಪ್ರದೇಶದಲ್ಲಿ ೫೦ ಎಂಎಲ್‌ಡಿಯ ಶುದ್ಧೀಕರಿಸಿದ ಘಟಕವನ್ನು ನಿರ್ಮಿಸಿ, ಅಲ್ಲಿಂದ ಪೈಪ್‌ಲೈನ್ ಮೂಲಕ ನೀರನ್ನು ನೇರವಾಗಿ ಮಣಿಪಾಲದ ಜಿಎಲ್‌ಆರ್‌ಗೆ ತೆಗೆದುಕೊಂಡು ಬಂದು, ನೀರನ್ನು ವಿತರಿಸುವುದಾಗಿ ನಿರ್ಧಾರ ತೆಗೆದುಕೊಳ್ಳಲಾಯಿತು. ದಾರಿಯ ಮಧ್ಯೆ ಬರುವ ಎಲ್ಲ ಗ್ರಾಪಂಗಳಿಗೆ ಈ ಶುದ್ಧೀಕರಿಸಿದ ನೀರನ್ನು ಕೊಡಲು ನಿಶ್ಚಯಿಸಲಾಯಿತು. ಅದೇ ರೀತಿ ದಾರಿಯ ಮಧ್ಯೆ ಪೈಪ್ ಅಳವಡಿಸಲು ಅವಶ್ಯಕತೆ ಇರುವಲ್ಲಿ ರಸ್ತೆಯನ್ನು ಅಗೆದರೆ, ಮತ್ತೆ ಅದನ್ನು ಮರು ಡಾಮರೀಕರಣ ನಡೆಸಿ ಪೂರ್ಣ ಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು. ಹೀಗಾಗಿ ಮರು ಟೆಂಡರ್ ಕರೆದು ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಟೆಂಡರ್ ಕರೆದು ಕಾಮಗಾರಿ ಆರಂಭವಾದ ಬಗ್ಗೆ ವರದಿಯನ್ನು ಅರ್ಜಿ ಸಮಿತಿಗೆ ನೀಡಬೇಕೆಂದು ಅಧ್ಯಕ್ಷ ಬಸವರಾಜ ಹೊರಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಸಭೆಯಲ್ಲಿ ಭಾಗವಹಿಸಿ ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ವಿವರಿಸಿ ತಕ್ಷಣ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದರು. ಈ ಸಭೆಯಲ್ಲಿ ಅರ್ಜಿ ಸಮಿತಿ ಸದಸ್ಯರು, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್, ಬೃಹತ್ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕೆಯುಐಡಿಎಫ್‌ಸಿ ಆಡಳಿತ ನಿರ್ದೇಶಕ ಇಬ್ರಾಹಿಂ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮತ್ತು ಕೆಐಡಿಎಫ್‌ಸಿ ಅಧಿಕಾರಿಗಳು ಹಾಜರಿದ್ದರು.

Leave a Comment