ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಜೆಡಿಎಸ್ ಯತ್ನ: ಆರೋಪ

ಮಧುಗಿರಿ, ಸೆ. ೧೦-  ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಮತದಾರ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದರೂ ಜೆಡಿಎಸ್ ಪಕ್ಷದವರು ಅಧ್ಯಕ್ಷ ಸ್ಥಾನ ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡು ಅಧಿಕಾರ ಗದ್ದುಗೆ ಏರುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಎನ್. ಗಂಗಣ್ಣ ಆರೋಪಿಸಿದರು.

ಪಟ್ಟಣದ ಎಂ.ಎನ್.ಕೆ. ಸಮುದಾಯಭವನದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಸೆ. 3 ರಂದು ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ರಾಜ್ಯ ಪತ್ರದಲ್ಲಿ ಪ್ರಕಟವಾಗಿತ್ತು. ಆದರೆ ಹಾಲಿ ಶಾಸಕರು ಸೋಲಿನ ಹತಾಶೆಯಿಂದ ಮೀಸಲಾತಿ ಬದಲಾಯಿಸಿ ಅಧ್ಯಕ್ಷ ಸ್ಥಾನ ಪ.ಪಂಗಡಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿ ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟಿರುವುದನ್ನು ಖಂಡನೀಯ ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ರವರ ಗಮನಕ್ಕೂ ತಾರದೆ ಏಕಾಏಕಿ ಅಧಿಕಾರ ದಾಹದಿಂದ ಅಧ್ಯಕ್ಷರ ಮೀಸಲಾತಿ ಬದಲಾಯಿಸುವುದು ಸರಿಯಲ್ಲ. ಸರ್ಕಾರದ ಆದೇಶ ಪತ್ರದಂತೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಬೇಕು. ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ರವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಒಂದು ವೇಳೆ ಹಳೆ ಮೀಸಲು ಪಟ್ಟಿ ಮುಂದುವರೆಸದಿದ್ದರೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸೇರಿದಂತೆ ಮಧುಗಿರಿಯ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಒಗ್ಗೂಡಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜೀನಾಮೆ ಕೊಡುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಎಸ್. ಮಲ್ಲಿಕಾರ್ಜುನಯ್ಯ, ಎಸ್.ಆರ್. ರಾಜಗೋಪಾಲ್, ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಎಂ.ವಿ.ಗೋವಿಂದರಾಜು, ಎಂ.ಎಸ್. ಚಂದ್ರಶೇಖರ್, ನೂತನ ಸದಸ್ಯರುಗಳಾದ ಅಲೀಂ ಉಲ್ಲಾ, ಸಿ. ನಟರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರುಗಳಾದ ಎಂ.ಎಸ್. ಶಂಕರ್‍ನಾರಾಯಣ್, ಎಂ.ವಿ. ಮಂಜುನಾಥ್, ಎಂ.ಜಿ. ರಾಮು, ಶಕೀಲ್, ಸಾಧಿಕ್, ಎಂ. ಶ್ರೀಧರ್, ಲೋಕೇಶ್, ಎಂ.ಜಿ. ಉಮೇಶ್. ಆನಂದಕೃಷ್ಣ, ಆನಂದ್ ಮತ್ತಿತರರು ಉಪಸ್ಥಿತರಿದ್ದರು.

Leave a Comment