ವಾಣಿಜ್ಯ ಮಳಿಗೆಗಳ ವಿವಾದ ಡಿಸಿ ಅಂಗಳಕ್ಕೆ

ಹುಳಿಯಾರು, ಜ. ೧೨- ಪಂಚಾಯ್ತಿಗೆ ಸೇರಿರುವ ವಾಣಿಜ್ಯ ಮಳಿಗೆಯಲ್ಲಿನ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಹಾಲಿ ಮಳಿಗೆದಾರರನ್ನೇ ಮುಂದುವರಿಸಬೇಕು ಅಥವಾ ಮರು ಹರಾಜು ಮಾಡಬೇಕೋ ಎಂಬ ವಿವಾದಕ್ಕೀಡಾಗಿದ್ದ ವಿಚಾರವನ್ನು ಕಾನೂನಾತ್ಮಕವಾಗಿ ಜಿಲ್ಲಾಧಿಕಾರಿಗಳೇ ಬಗೆಹರಿಸುವಂತೆ ಸರ್ವಾನುಮತದಿಂದ ಒಪ್ಪಿಗೆ ನೀಡುವುದರ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಮಳಿಗೆ ವಿಚಾರ ಒಂದು ತಾರ್ಕಿಕ ಅಂತ್ಯ ಕಂಡಂತಾಯಿತು.

ಹುಳಿಯಾರು ಪಟ್ಟಣ ಪಂಚಾಯ್ತಿಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ಹಾಗೂ ಶಾಸಕ ಜೆ.ಸಿ. ಮಾಧುಸ್ವಾಮಿ ಉಪಸ್ಥಿತಿಯಲ್ಲಿ ಗೀತಾಪ್ರದೀಪ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಮಳಿಗೆ ವಿಚಾರವಾಗಿ ಪರ-ವಿರೋಧ ಮಾತನಾಡುವ ಸಂದರ್ಭದಲ್ಲಿ ಶಾಸಕರು ಮಧ್ಯ ಪ್ರವೇಶಿಸಿ ನಾವೆಲ್ಲ ಚುನಾಯಿತ ಪ್ರತಿನಿಧಿಗಳು ವ್ಯಾಪಾರಸ್ಥರ ಪರ-ವಿರೋಧ ಮಾತನಾಡಿ, ನಿಷ್ಠುರವಾಗುವುದರ ಬದಲು ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಈ ಸಮಸ್ಯೆಯನ್ನು ಹಸ್ತಾಂತರಿಸುವುದು ಸೂಕ್ತ ಮಳಿಗೆಗಳನ್ನು ಮರು ಹರಾಜು ಮಾಡುವಿರೋ ಅಥವಾ ಇರುವವರೆಗೆ ಬಾಡಿಗೆ ಹೆಚ್ಚು ಮಾಡಿ ಅವರನ್ನೇ ಮುಂದುವರಿಸಲು ಒಪ್ಪಿಗೆ ನೀಡುವಿರೋ ಒಟ್ಟಿನಲ್ಲಿ ಪಂಚಾಯ್ತಿಗೆ ಆದಾಯ ಬರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಆದರೆ ಮೂಲ ಮಳಿಗೆದಾರರು ಹೆಚ್ಚು ಹಣ ಪಡೆದು ಬೇರೆಯವರಿಗೆ ಪರಭಾರೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ಪಂಚಾಯ್ತಿ ಮಳಿಗೆಯನ್ನು ಲಕ್ಷಾಂತರ ರೂಪಾಯಿ ಕೊಟ್ಟು ಇಲ್ಲಿ ಬಂದು ಸೇರಿದವರನ್ನು ಯಾವುದೇ ಮುಲಾಜಿಲ್ಲದೆ ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸಿ ಅಂಗಡಿಗಳನ್ನು ಮರು ಹರಾಜು ಮಾಡುವಂತೆ ಖಡಕ್ಕಾಗಿ ತಿಳಿಸಿದರು.

ಪುಟ್ಬಾತ್ ಅಂಗಡಿ ತೆರವು
ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ಬಸ್ ಶೆಲ್ಟರ್ ಹಾಗೂ ರಾಜಕುಮಾರ್ ರಸ್ತೆಯಲ್ಲಿ ಫುಟ್‌ಪಾತ್ ಆಕ್ರಮಿಸಿಕೊಂಡಿರುವ ಗೂಡಂಗಡಿಯವರನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ರಂಗನಾಥಸ್ವಾಮಿ ದೇವಸ್ಥಾನ, ರಾಮಾಹಾಲ್ ಎದುರು ಕೂಡ ಪಾದಚಾರಿಗಳಿಗೆ ಅಡ್ಡಿಯಾಗುತ್ತಿರುವ ಎಲ್ಲ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಕೆಲವು ಸದಸ್ಯರು ಒತ್ತಾಯಿಸಿದರು.

Leave a Comment