ವಾಟ್ಸ್ಯಾಪ್‌ನಲ್ಲಿ ಸುಳ್ಳುಸುದ್ದಿ: ಸಭಾಪತಿಯಿಂದ ದೂರು

ಉಡುಪಿ, ಮಾ.೧೪- ವಾಟ್ಸ್‌ಆಪ್‌ನಲ್ಲಿ ತನ್ನ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿರುವ ಕಿಡಿಗೇಡಿಗಳ ಬಗ್ಗೆ ಮಾಜಿ ಶಾಸಕ ಯು.ಆರ್.ಸಭಾಪತಿ ಉಡುಪಿ ಠಾಣೆಯ ಸೈಬರ್ ವಿಭಾಗದಲ್ಲಿ ದೂರು ಸಲ್ಲಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ತಾನು ಭ್ರಷ್ಟಾಚಾರದ ಆರೋಪದ ಮಾಡಿರುವುದಾಗಿ ವಾಟ್ಸ್‌ಆಪ್‌ನಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. ನನ್ನ ಮತ್ತು ಪ್ರಮೋದ್ ಮಧ್ವರಾಜ್ ಮಧ್ಯೆ ಒಡಕು ಮೂಡಿಸುವ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ಸಚಿವ ಪ್ರಮೋದ್ ವಿರುದ್ಧ ಯವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೆ ಸರ್ವತ್ರ ಜನ ಬೆಂಬಲ ವ್ಯಕ್ತವಾಗಿರುವುದನ್ನು ಸಹಿಸಲಾಗದೆ ಅವರ ವಿರುದ್ಧ ಸೂಕ್ತ ಅಭ್ಯರ್ಥಿಯ ಆಯ್ಕೆ ಮಾಡಲು ಚಡಪಡಿಸುತ್ತಿರುವವರು ತನ್ನ ಹೆಸರಿನಲ್ಲಿ ಈ ಅಪಪ್ರಚಾರ ಮಾಡುತ್ತಿದ್ದಾರೆ. ಇದರಲ್ಲಿ ಸತ್ಯಾಂಶವಿಲ್ಲ ಎಂದು ಯು.ಆರ್.ಸಭಾಪತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುವ ಕಾಂಗ್ರೆಸ್ ಖಂಡನೆ:
ಮಾಜಿ ಶಾಸಕ ಯು.ಆರ್.ಸಭಾಪತಿ ಹೆಸರಿನಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರವನ್ನು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕಿಣಿ ತೀವ್ರವಾಗಿ ಖಂಡಿಸಿದ್ದಾರೆ. ಚುನಾವಣಾ ಸಮಯ ಉಡುಪಿ ವಿಧಾನಸಭಾಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸೋಲುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದು ಇದರಿಂದ ಹತಾಶರಾಗಿ ಪ್ರಮೋದ್ ಮಧ್ವರಾಜ್ ಬಗ್ಗೆ ಸಭಾಪತಿ ಅವರ ಹೆಸರಿನಲ್ಲಿ ಇಲ್ಲಸಲ್ಲದ ಸುಳ್ಳು ಅಪಪ್ರಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಯ ಬಿಡುತ್ತಿರುವುದು ತೀರಾ ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದ್ದಾರೆ.

Leave a Comment