ವಾಜಪೇಯಿ ಸ್ಥಿತಿ ವಿಷಮ : ದೆಹಲಿಯತ್ತ ಗಣ್ಯರ ದಂಡು, ಅಜಾತ ಶತ್ರುವಿನ ಗುಣಗಾನ

ನವದೆಹಲಿ, ಆ. ೧೬- ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದೇಹಸ್ಥಿತಿ ವಿಷಮಗೊಂಡಿದ್ದು, ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಜೂನ್ 11 ರಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದ ವಾಜಪೇಯಿ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆಯಿಂದ ಅವರ ಪರಿಸ್ಥಿತಿ ವಿಷಮಗೊಂಡು ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಿಗ್ಗೆ ಅವರ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾದ ಹಿನ್ನೆಲೆಯಲ್ಲಿ ಆಗ್ರಾ, ಗ್ವಾಲಿಯರ್ ಸೇರಿದಂತೆ, ಮತ್ತಿತರ ಕಡೆ ಇರುವ ವಾಜಪೇಯಿ ಕುಟುಂಬದ ಸದಸ್ಯರನ್ನು ಆಸ್ಪತ್ರೆಗೆ ಬರುವಂತೆ ಬುಲಾವ್ ನೀಡಲಾಯಿತು.

ನಿನ್ನೆ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ವಿಚಾರಿಸಿದ್ದರು. ಇಂದು ಬೆಳಿಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರಾದ ರಾಜಾನಾಥ್ ಸಿಂಗ್, ಸುಷ್ಮಾ ಸ್ವರಾಜ್ ಸೇರಿದಂತೆ, ಹಲವು ಸಚಿವರು ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.

ಬಿಜೆಪಿ ಪಕ್ಷ ಇಂದಿನ ತನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಆಸ್ಪತ್ರೆಯತ್ತ ಪಕ್ಷದ ನಾಯಕರು ದೌಡಾಯಿಸಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ ಕೂಡ ಇಂದಿನ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದೆಹಲಿಯಲ್ಲಿ ಉಳಿದುಕೊಂಡಿದ್ದಾರೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ  ಸೇರಿದಂತೆ, ಹಲವು ಹಿರಿಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ, ವಾಜಪೇಯಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.

ವಾಜಪೇಯಿ ಅವರ ಆರೋಗ್ಯ ವಿಚಾರಿಸಲು ಗಣ್ಯಾತಿಗಣ್ಯರು ಏಮ್ಸ್ ಆಸ್ಪತ್ರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ರೋಗಿಗಳನ್ನು ಯಾರನ್ನೂ ಒಳಬಿಡದೆ ಆಸ್ಪತ್ರೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದೆ.

ಆಸ್ಪತ್ರೆಯ ಸುತ್ತಮುತ್ತ ಇರುವ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಎಲ್ಲೆಡೆ ವ್ಯಾಪಕ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. ಬೆಳಿಗ್ಗೆ 11 ಗಂಟೆಗೆ ಆರೋಗ್ಯದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ಏಮ್ಸ್ ಆಸ್ಪತ್ರೆ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಆದರೂ ಅವರ ಆರೋಗ್ಯ ಪರಿಸ್ಥಿತಿ ಸುಧಾರಣೆಗಾಗಿ ವೈದ್ಯರ ತಂಡ ಟೊಂಕ ಕಟ್ಟಿ ನಿಂತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ವಾಜಪೇಯಿ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾರ್ಯತಂತ್ರ ರೂಪಿಸಲು ಬಿಜೆಪಿ ಇದೇ 18 ಮತ್ತು 19 ರಂದು ಕರೆದಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಮುಂದೂಡಿದೆ.  ವಾಜಪೇಯಿ ಅವರ ಆರೋಗ್ಯದ ಬಗ್ಗೆ ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

1996 ರಲ್ಲಿ ಪ್ರಧಾನಿ

1996 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 187 ಸೀಟುಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದಾಗ ಆಗಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದರು. ಅದರಂತೆ ಅಟಲ್ ಬಿಹಾರಿ ವಾಜಪೇಯಿ ಭಾರತದ 10ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರಾದರೂ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದ ಕಾರಣ 13 ದಿನದಲ್ಲೇ ವಾಜಪೇಯಿ ಅವರ ಸರ್ಕಾರ ಪಥನಗೊಂಡಿತು.

1998 ರಲ್ಲಿ ಮತ್ತೆ ಲೋಕಸಭೆಗೆ ಚುನಾವಣೆ ನಡೆದಾಗ ಬಿಜೆಪಿ ಮಿತ್ರ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿದ್ದಾದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಆಗ ವಾಜಪೇಯಿ ಅವರು ಸಮಾನಮನಸ್ಕ ಪಕ್ಷಗಳ ಜತೆಗೂಡಿ ಎನ್‌ಡಿಎ ಮೈತ್ರಿ ಕೂಟ ರಚಿಸಿಕೊಂಡು 1998 ಮಾರ್ಚ್ 10 ರಂದು ಪ್ರಧಾನಿ ಹುದ್ದೆಗೆ ಏರಿದರು. ಪ್ರಧಾನಿಯಾಗಿ ಉತ್ತಮ ಹೆಸರು ಮಾಡಿದ ಅವರು, ದೇಶದಲ್ಲಿ ಅಭಿವೃದ್ಧಿ ಕ್ರಾಂತಿಗೆ ಕಾರಣವಾದರು. ಅವರ ಕಾಲದಲ್ಲೇ ದೇಶದಲ್ಲೇ ಮೊದಲ ಬಾರಿಗೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣವನ್ನು ಸಂಪರ್ಕಿಸುವ ಚತುಷ್ಪಥ ರಸ್ತೆಗಳ ನಿರ್ಮಾಣವಾದವು. ಇದು ವಾಜಪೇಯಿ ರವರಿಗೆ ಹೆಸರು ತಂದುಕೊಟ್ಟಿತು.

ಮೈತ್ರಿ ಕೂಟದ ನಾಯಕರಾಗಿ ಎಲ್ಲ ಪಕ್ಷಗಳ ವಿಶ್ವಾಸಗಳಿಸಿದ್ದ ಅಟಲ್ ಬಿಹಾರಿ ವಾಜಪೇಯಿ ರವರ ವಿರುದ್ಧ ಎಐಡಿಎಎನ್‌ಕೆಯ ಜಯಲಲಿತಾ ಗಂಭೀರ ಆರೋಪ ಮಾಡಿ ತಮ್ಮ ಬೆಂಬಲವನ್ನು ಹಿಂಪಡೆಯಿತು. ಆಗ ಲೋಕಸಭೆಯಲ್ಲಿ ನಡೆದ ವಿಶ್ವಾಸ ಮತ ಪರೀಕ್ಷೆಯಲ್ಲಿ ಬಹುಮತ ಸಾಬೀತುಪಡಿಲು ವಾಜಪೇಯಿ ವಿಫಲರಾದ ಕಾರಣ ಅವರ ಸರ್ಕಾರ ಎರಡನೇ ಬಾರಿಗೆ ಪಥನಗೊಂಡಿತು. ನಂತರ ಯಾವುದೇ ರಾಜಕೀಯ ಪಕ್ಷಗಳು ಸರ್ಕಾರ ರಚಿಸಲು ಸಾಧ್ಯವಾಗದ ಕಾರಣ 1999 ರಲ್ಲಿ ಲೋಕಸಭೆಗೆ ಮತ್ತೆ ಚುನಾವಣೆ ನಡೆದು ಎನ್‌ಡಿಎ ಮೈತ್ರಿಕೂಟ ಮತ್ತೆ ಬಹುಮತ ಪಡೆದು ಆಕ್ಟೋಬರ್‌ನಲ್ಲಿ ವಾಜಪೇಯಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾದರು.

ಪ್ರಧಾನಿಯಾಗಿ ಐದೂ ವರ್ಷ ಪೂರೈಸಿದ ವಾಜಪೇಯಿ, ಜನರ ಪ್ರೀತಿಗೆ ಪಾತ್ರರಾಗಿದ್ದರಾದರೂ 2004ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ದಯನೀಯ ಸೋಲು ಕಂಡಿತು. ಇದಾದ ನಂತರ 2005 ರಲ್ಲಿ ವಾಜಪೇಯಿ ರವರು ಸಕ್ರಿಯ ರಾಜಕಾರಣ ನಿವೃತ್ತಿ ಘೋಷಣೆ ಮಾಡಿದರು.

ಸದಾ ಶಾಂತಿಮಂತ್ರಿ ಜಪಿಸಿ, ನೆರೆ ರಾಜ್ಯಗಳೊಂದಿಗೆ ಉತ್ತಮ ಬಾಂಧವ್ಯಕ್ಕಾಗಿ ಶ್ರಮಿಸುತ್ತಿದ್ದ ವಾಜಪೇಯಿ ರವರ ಕಾಲದಲ್ಲೇ ಭಾರತ ಹಾಗೂ ಪಾಕಿಸ್ತಾನ ದೇಶದ ಶಾಂತಿ ಹಾಗೂ ಸೌಹಾರ್ದಯ ಸ್ನೇಹದ ಧ್ಯೋತಕವಾಗಿತ್ತು. ಪಾಕಿಸ್ತಾನ ಕಾರ್ಗಿಲ್ ಯುದ್ಧ ಸಹ ವಾಜಪೇಯಿ ಪ್ರಧಾನಿಯಾಗಿದ್ದಾಗ ನಡೆದು ಭಾರತ ಆಪರೇಷನ್ ವಿಜಯಿ ಹೆಸರಿನಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ ವಿಜಯೋತ್ಸವ ಆಚರಿಸಿತು.

ಭಾರತದ ಸೇನಾ ಬಲವನ್ನು ಹೆಚ್ಚಿಸಲು ಆದ್ಯತೆ ನೀಡಿದ್ದ ವಾಜಪೇಯಿ ರವರು ಪ್ರಧಾನಿಯಾಗಿದ್ದಾಗಲೇ ಪೋಕಾನ್ ಅಣ್ವಸ್ತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.

2009 ರಲ್ಲಿ ಪಾಶ್ವರ್ವಾಯುವಿಗೆ ತುತ್ತಾದ ನಂತರ ಸಾರ್ವಜನಿಕವಾಗಿ ವಾಜಪೇಯಿ ರವರು ಹೊರಗೆ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಮನೆಯಲ್ಲೇ ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿ ಚಿಕಿತ್ಸೆ ನೀಡಲಾಗಿತ್ತು. ಕಳೆದ ಎರಡು ತಿಂಗಳಿಂದ ಅವರ ಆರೋಗ್ಯ ಪರಿಸ್ಥಿತಿ ವಿಷಮಿಸಿದ್ದರಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭಾರತ ರತ್ನ ಗೌರವ

ವಾಜಪೇಯಿರವರಿಗೆ ಭಾರತ ಅತ್ಯುನ್ನತ ನಾಗರಿಕ ಪ್ರಶಸ್ತಿ  ಭಾರತ ರತ್ನವನ್ನು 2015 ರಲ್ಲಿ ನೀಡಿ ಗೌರವಿಸಲಾಗಿತ್ತು. ಅವರಿಗೆ ಪದ್ಮವಿಭೂಷಣ, ಲೋಕಮಾನ್ಯತಿಲಕ್ ಪ್ರಶಸ್ತಿ, ಪಂಡಿತ್ ವಲ್ಲಬಾಯ್ ಪ್ರಶಸ್ತಿ, ಉತ್ತಮ ರಾಜಕೀಯ ಪಟು ಪ್ರಶಸ್ತಿ, ಬಾಂಗ್ಲಾ ವಿಮೋಚನಾ ಯುದ್ಧ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

Leave a Comment