ವಾಜಪೇಯಿ ನಿಧನಕ್ಕೆ ಸಿದ್ದಗಂಗಾ ಶ್ರೀಗಳ ಸಂತಾಪ

ತುಮಕೂರು, ಆ. ೧೮- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಕಿರಿಯಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ದೇಶದ ಮೂರು ಬಾರಿ ಪ್ರಧಾನ ಮಂತ್ರಿಗಳಾಗಿದ್ದ ವಾಜಪೇಯಿ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತೀವ ದುಃಖವಾಯಿತು. ಶ್ರೀಯುತರು ದಕ್ಷ, ಪ್ರಾಮಾಣಿಕ, ಜನಪ್ರಿಯ ಪ್ರಧಾನ ಮಂತ್ರಿಗಳಾಗಿದ್ದರು. ಇವರ ಕಾಲದಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿ ದೇಶದ ಅಭಿವೃದ್ಧಿಗೆ ಕಾರಣಕರ್ತರಾದರು ಎಂದು ಶ್ರೀಗಳು ಕಂಬನಿ ಮಿಡಿದಿದ್ದಾರೆ.

ದೇಶದ ಉದ್ದಗಲಕ್ಕೂ ಕ್ವಾಡ್ರಲ್ಯಾಟರ್ ರಸ್ತೆಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಕಾರಣೀಭೂತರಾಗಿದ್ದಾರೆ. ಅಲ್ಲದೆ ರೈತ ಸಮುದಾಯಕ್ಕೆ ವರಪ್ರಧಾನವಾದ ನದಿ ಜೋಡಣೆಯ ಕನಸನ್ನು ಕಂಡವರಾಗಿದ್ದರು. ಚಿಕ್ಕವಯಸ್ಸಿನಿಂದಲೂ ರಾಜಕೀಯ ಅಖಾಡಕ್ಕೆ ಧುಮುಕಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನು ಅನುಭವಿಸಿದವರು. ಕವಿ ಹೃದಯಿಗಳಾಗಿ ಅನೇಕ ಕವನ ಸಂಕಲಗಳನ್ನು ರಚಿಸಿದ್ದಾರೆ.

ಶ್ರೀ ಸಿದ್ದಗಂಗಾ ಮಠದಲ್ಲಿ 1999ರ ಜ. 3 ರಂದು ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ಉಪದೇಶ ನೀಡಿರುವುದು ಸ್ಮರಣೀಯವಾದುದು. ಶ್ರೀಯುತರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಅವರ ನಿಧನದಿಂದ ಕುಟುಂಬದ ಸದಸ್ಯರಿಗೆ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಹಾಗೂ ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಸಂತಾಪ ಸಂದೇಶದಲ್ಲಿ ಶ್ರೀಗಳು ತಿಳಿಸಿದ್ದಾರೆ.

Leave a Comment