ವಾಜಪೇಯಿ ಚಿತಾಭಸ್ಮ ಕಾವೇರಿಯಲ್ಲಿ ವಿಸರ್ಜನೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಆ. ೨೩- ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ವಾಜಪೇಯಿ ರವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಕಾವೇರಿ ನದಿ ಸಂಗಮದಲ್ಲಿ ಇಂದು ವಿಸರ್ಜಿಸಲಾಯಿತು.
ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಸಂಸದೆ ಶೋಭಾಕರಂದ್ಲಾಜೆ ಸೇರಿದಂತೆ ರಾಜ್ಯ ಬಿಜೆಪಿಯ ಪ್ರಮುಖರು, ಮುಖಂಡರು ಚಿತಾ ಭಸ್ಮ ವಿಸರ್ಜನೆಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ನಗರದ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯದಿಂದ ಚಿತಾ ಭಸ್ಮವನ್ನು ಮೆರವಣಿಗೆಯಲ್ಲಿ ಶ್ರೀರಂಗಪಟ್ಟಣಕ್ಕೆ ಕೊಂಡೊಯ್ಯಲಾಯಿತು.
ಮಲ್ಲೇಶ್ವರಂ, ನವರಂಗ ವೃತ್ತ, ವಿಜಯನಗರ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ರಾಜರಾಜೇಶ್ವರಿ ನಗರ ಗೇಟ್, ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮೂಲಕ ಶ್ರೀರಂಗಪಟ್ಟಣಕ್ಕೆ ಚಿತಾ ಭಸ್ಮವನ್ನು ಕೊಂಡೊಯ್ದು, ಪಶ್ಚಿಮವಾಹಿನಿಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆ ಸಂದರ್ಭದಲ್ಲಿ ದಾರಿಯುದ್ದಕ್ಕೂ ದಿ.ವಾಜಪೇಯಿ ರವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಅಸ್ತಿ ಕಳಸಕ್ಕೆ ಆರತಿ ಬೆಳಗಿ, ಪುಷ್ಪಾಚನೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮಾರ್ಗದುದ್ದಕ್ಕೂ ನೂರಾರು ಜನ ನಿಂತು ವಾಜಪೇಯಿ ರವರ ಅಸ್ತಿ ಕಳಸಕ್ಕೆ ನಮಿಸುತ್ತಿದ್ದು ಕಂಡು ಬಂತು.
ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೇಯರ್ ಸಂಪತ್‌ರಾಜ್ ಅವರು ವಾಜಪೇಯಿ ಅಸ್ತಿ ಕಳಸಕ್ಕೆ ಪುಷ್ಪಾರ್ಚನೆ ಮಾಡಿದರು.

Leave a Comment