ವಸ್ತುಗಳನ್ನು ರಕ್ಷಿಸುವಂತೆ ಅರಣ್ಯವನ್ನು ರಕ್ಷಿಸಿ

ಹನೂರು, ಸೆ.12- ಅರಣ್ಯ ಸಂರಕ್ಷಣೆಯ ಜೊತೆಗೆ ಸ್ಥಳೀಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದ ಡಿಸಿಎಫ್ ಶ್ರೀನಿವಾಸ್ ಅವರ ವ್ಯಕ್ತಿತ್ವ ಇಂದಿನ ಅಧಿಕಾರಿಗಳಿಗೆ ಮಾದರಿ ಎಂದು ಸಿಸಿಎಫ್ ವಿಜಯ್‍ಲಾಲ್ ಮೀನಾ ತಿಳಿಸಿದರು.
ಕಾವೇರಿ ವನ್ಯಜೀವಿಧಾಮದ ಎರಕೆಯಂ ಅರಣ್ಯ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀನಿವಾಸ್ ಅವರ ತಮ್ಮ ಕರ್ತವ್ಯದ ಜೊತೆಗೆ ಗೋಪಿನಾಥಂ ಗ್ರಾಮದ ಜನತೆಗೂ ಸಹಾಯ ಮಾಡುವ ಮೂಲಕ ಇಲ್ಲಿನ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ನರಹಂತಕನ ವಿರುದ್ಧ ನೇರ ಹೋರಾಟದಿಂದ ತಮ್ಮ ಪ್ರಾಣ ತ್ಯಾಗಮಾಡಿದ ಮಹಾನ್‍ತ್ಯಾಗಿಯ ಕಾರ್ಯವೈಖರಿ ಇಂದು ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಮಾದರಿಯಾಗಿದೆ. ಇಂದಿನ ಸಿಬ್ಬಂದಿಗಳು ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದೇ ಹೆಮ್ಮೆಯ ಸಂಗತಿ. ಅರಣ್ಯ ಇಲಾಖೆಗೆ ಸೇರ್ಪಡೆಯಾಗುವ ಯುವಕರ ಸಂಖ್ಯೆ ಹೆಚ್ಚಾಗಬೇಕು. ನಮ್ಮ ವಸ್ತುಗಳೆಂದು ಇತರೆ ವಸ್ತುಗಳನ್ನು ಜೋಪಾನ ಮಾಡುವ ಹಾಗೇ ಅರಣ್ಯವೂ ಸಹ ನಮ್ಮದೇ ಎಂದು ಭಾವಿಸಿ ಅದರ ರಕ್ಷಣೆಗೆ ಮುಂದಾಗಬೇಕು.
ಅರಣ್ಯ ಇಲಾಖೆ ಸಿಬ್ಬಂದಿಗಳು ಯಾವುದಸೇ ಅಳುಕಿಲ್ಲದೆ ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು. ಹಾಗೂ ಜಿಲ್ಲೆಯಲ್ಲಿಯೇ ಸಮೃದ್ಧವಾದ ಅರಣ್ಯ ಸಂಂಪತ್ತಿನ ರಕ್ಷಣೆಗೆ ಇಲಾಖೆಯ ಸಿಬ್ಬಂದಿ ಜೊತೆ ಸ್ಥಳೀಯ ನಾಗರೀಕರು ಕೈಜೋಡಿಸಬೇಕು ತಮ್ಮ ಪ್ರಾಮಾಣಿಕ ಕರ್ತವ್ಯದ ಮೂಲಕೆ ಅರಣ್ಯ ಇಲಾಖೆಗೆ ಕೀರ್ತಿ ತಂದುಕೊಟ್ಟ ಹುತಾತ್ಮ ಶ್ರೀನಿವಾಸನ್ ಅವರ ಜೀವನ ಎಲ್ಲಾ ಸಿಬ್ಬಂದಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಎಫ್‍ಓ ಏಡುಕುಂಡಲು, ಎಸಿಎಫ್‍ಗಳಾದ ಪ್ರಶಾಂತ್, ಅಂಕರಾಜು, ಮುತ್ತೇಗೌಡ, ಆರ್‍ಎಫ್‍ಓಗಳಾದ ಮಹದೇವಸ್ವಾಮಿ, ಸುಂದರ್, ರಾಜೇಶ್‍ಗವಾಲ್, ಶಂಕರ್ ಅಂತರಗಟ್ಟಿ, ರಾಜಶೇಖರಪ್ಪ, ಸಯ್ಯಾದ್ ನದಾಫ್, ಗುರುರಾಜ್, ಫರಾ, ಕಿರಣ್‍ಕುಮಾರ್, ರುಕಿಯಾಪರ್ವಿನ್ ಇತರರು ಇದ್ದರು.

Leave a Comment