ವಸತಿ ನಿಲಯ : ಡಿಸಿಎಂ ದಿಢೀರ್ ಭೇಟಿ – ಕಳಪೆ ಊಟ, ತರಾಟೆ

ರಾಯಚೂರು.ಫೆ.23- ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ‌ ಉಮಲೂಟಿ ವಸತಿ ನಿಲಯಕ್ಕೆ‌ ಉಪ ಮುಖ್ಯಮಂತ್ರಿಳಾದ ಗೋವಿಂದ ಎಂ.ಕಾರಜೋಳ ಅವರು ನಿನ್ನೆ ತಡರಾತ್ರಿ ಭೇಟಿ, ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಗುಣಮಟ್ಟದ ಊಟ ಸೇವಿಸಿ, ವಾರ್ಡನ್‌ನನ್ನು ತರಾಟೆಗೆ ತಗೆದುಕೊಂಡರು.
ಪರಿಶಿಷ್ಟ ಜಾತಿ‌ ಮತ್ತು ಪಂಗಡದ ವಿದ್ಯಾರ್ಥಿ ನಿಲಯಗಳ ಉತ್ತಮ. ನಿರ್ವಹಣೆಗೆ ಸರ್ಕಾರ ಇಷ್ಟೊಂದು ಅನುದಾನ ನೀಡಿದರೂ, ಕಳಪೆ ಗುಣಮಟ್ಟದ ಊಟ ನೀಡಿ, ಸ್ವಚ್ಚತೆ ಕಾಯ್ದುಕೊಳ್ಳದೇ ವಿದ್ಯಾರ್ಥಿಗಳ ರೋಗ ರುಜನುಗಳು ದಾರಿ ಮಾಡಲಾಗುತ್ತಿದೆಂದು ಬೇಸರ ವ್ಯಕ್ತಪಡಿಸಿದರು. ಗುಣಮಟ್ಟದ ಊಟ ನೀಡದೇ, ಪೂರ್ಣವಾಗಿ ಬೇಯಿಸದ ಊಟ ಹಾಕಿರುವುದಕ್ಕೆ ಕೆಂಡಾಮಂಡಲವಾದರು.
ಪ್ರತಿ ದಿನ ಇದೇ ರೀತಿಯ ಊಟ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು‌ ದೂರು ನೀಡಿದರು. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದಾಗ ಅಡುಗೆ ತಯಾರಕರು ಸರಿಯಾಗಿ ಬಾರದಿರುವುದು ಕಂಡು ಬಂದಿತು. ಅಡುಗೆ ತಯಾರಕರು ಹಾಗೂ ಸಹಾಯಕರು ಉಚಿತವಾಗಿ ಕೆಲಸ‌ ಮಾಡುತ್ತಿಲ್ಲ. ಅಂತಹ ಬೇಜವಾಬ್ದಾರಿ ಹೊಂದಿರುವವರ ಸೇವೆಯನ್ನು ಮುಂದುವರೆಸಬಾರದು ಎಂದು ಸೂಚಿಸಿದರು.
ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕುಮಾರ ನಾಯಕ್ ಅವರಿಗೆ ದೂರವಾಣಿ ಕರೆ ಮಾಡಿದ ಡಿಸಿಎಂ, ವಿದ್ಯಾರ್ಥಿ ನಿಲಯದ ಅವ್ಯವಸ್ಥೆಗೆ ಕಾರಣರಾಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಒಟ್ಟು 4 ಲಕ್ಷ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ‌. ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆ, ತಾಲೂಕು, ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಊಟ ಮಾಡಿ ಊಟ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಬೇಕು.
ಯಾವುದೇ ವಿದ್ಯಾರ್ಥಿಗೂ ಕಳಪೆ ಗುಣಮಟ್ಟದ ಊಟ ಹಾಗೂ ಕಳಪೆ ಗುಣಮಟ್ಟದ ಸೌಲಭ್ಯ ನೀಡಬಾರದು. ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಊಟೋಪಚಾರ ನೀಡುವುದರ ಜೊತೆಗೆ ಉತ್ತಮ ಪರೀಕ್ಷಾ ಫಲಿತಾಂಶ ಬರುವಂತೆ ಪಾಠ ಪ್ರವಚನ ನಡೆಸಬೇಕು. ವಿಶೇಷ ತರಗತಿಗಳನ್ನು ನಡೆಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ವಿದ್ಯಾರ್ಥಿ ನಿಲಯಗಳಲ್ಲಿ ವಾರ್ಡನ್ ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದುದು. ಜವಾಬ್ದಾರಿಯನ್ನರಿತು ಕಾರ್ಯನಿರ್ವಹಿಸಬೇಕು. ಬೇಜಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Leave a Comment