ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಡಿಸಿಎಂ ಸೂಚನೆ

ತುಮಕೂರು, ಅ. ೧೨- ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸಾರಿಗೆ, ವಿದ್ಯುತ್, ಆಸ್ಪತ್ರೆ, ರಸ್ತೆ, ವಸತಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಆದಷ್ಟು ಶೀಘ್ರ ಕಲ್ಪಿಸಿ, ಇಲ್ಲದಿದ್ದರೆ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ಆಸಕ್ತಿ ತೋರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದ ಅವರು, ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ತುಮಕೂರು ಜಿಲ್ಲೆ ಅಭಿವೃದ್ಧಿಯಾಗುತ್ತಿದ್ದು, ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಜಪಾನ್ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸ್, ರಸ್ತೆ, ವಿದ್ಯುತ್, ಆಸ್ಪತ್ರೆ, ಹೋಟೆಲ್, ವಸತಿನಿಲಯ, ನೀರು ಯಾವುದೇ ಸೌಲಭ್ಯಗಳು ಸರಿಯಾಗಿ ಕಲ್ಪಿಸಿಲ್ಲ ಎಂಬುದರ ಬಗ್ಗೆ ಜಪಾನ್ ಕಂಪೆನಿಗಳು ಮನವಿ ಸಲ್ಲಿಸಿವೆ.  ಆದ್ದರಿಂದ ಕಂಪೆನಿಗಳ ಕೋರಿಕೆಯಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೆ.ಐ.ಡಿ.ಬಿ. ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಜಪಾನ್ ಮೂಲದ ಟಿಮ್ಯಾಕ್ ಕಂಪೆನಿಯ ಅಧಿಕಾರಿ, ಜಪಾನ್ ದೇಶದ ಹಲವು ಕಂಪೆನಿಗಳು ತಮ್ಮ ಬಂಡವಾಳ ಹೂಡಲು ಆಸಕ್ತಿ ಹೊಂದಿವೆ.  ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಬಂಡವಾಳ ಹೂಡಿಕೆ ಮಾಡಲು ಉತ್ತೇಜಿಸಬೇಕು ಎಂದರು.

ಎತ್ತಿನ ಹೊಳೆ: ಶೀಘ್ರ ಸಾರ್ವಜನಿಕ ಸಭೆ
ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲುವಿನ ಎತ್ತಿನಹೊಳೆ ಡ್ಯಾಂ ನಿರ್ಮಾಣ ಮಾಡುವ ಸಂಬಂಧ ಆ ಭಾಗದಲ್ಲಿ ಶೀಘ್ರವೇ ರೈತರು, ಸಾರ್ವಜನಿಕರ ಸಭೆ ಆಯೋಜಿಸಿ ಅಹವಾಲು, ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ತಿಳಿಸಿದರು.

ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಡ್ಯಾಂ ನಿರ್ಮಾಣದಿಂದ ಮುಳುಗಡೆಯಾಗಲಿರುವ ಗ್ರಾಮಗಳ ರೈತ ಮುಖಂಡರು, ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಯೋಜನೆಗೆ ಕೊರಟಗೆರೆ ತಾಲ್ಲೂಕಿನ 5 ಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ 2 ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಲಿದ್ದು, ತಾಲ್ಲೂಕಿನಲ್ಲಿ 2893 ಎಕರೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 2834 ಎಕರೆ ಭೂಮಿ ಅಗತ್ಯವಿದೆ.  ನೋಂದಣಿ ಮೌಲ್ಯದಂತೆ ಕೊರಟಗೆರೆ ತಾಲ್ಲೂಕಿನಲ್ಲಿ 6 ಲಕ್ಷ ರೂ. ನಿಗಧಿ ಎನ್ನುವುದು ಅದೇ ಅಂತಿಮವಲ್ಲ.  ದೊಡ್ಡಬಳ್ಳಾಪುರ ತಾಲ್ಲೂಕು ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ಜಮೀನಿಗೆ ಏಕರೂಪ ದರ ನಿಗಧಿಗೆ ಸರ್ಕಾರದಲ್ಲಿ ತೀರ್ಮಾನವಾಗಬೇಕು. ಯಾವುದೇ ಕಾರ್ಯಕ್ಕೂ ವ್ಯತ್ಯಾಸವಾಗಲು ಅವಕಾಶ ನೀಡುವುದಿಲ್ಲ ಎಂದರು.

ಡ್ಯಾಂ ಮುಳುಗಡೆ ಆಗಲಿರುವ ಗ್ರಾಮಗಳ ಸುತ್ತಮುತ್ತಲಿನ ರೈತರು, ಸಾರ್ವಜನಿಕರು ಯೋಜನೆಯ ಬಗ್ಗೆ ಮಾಹಿತಿ ನೀಡಿ, ನಿಮ್ಮಿಂದ ಅಭಿಪ್ರಾಯ ಪಡೆಯಲಾಗುವುದು. ಆ ನಂತರ ಸರ್ಕಾರಕ್ಕೆ ನಿಮ್ಮ ಅಭಿಪ್ರಾಯವನ್ನು ಕ್ರೋಢೀಕರಿಸಿ ವರದಿ ಸಲ್ಲಿಸಲಾಗುವುದು ಎಂದರು.

ಸಭೆಯಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ದಿವ್ಯಾ ಗೋಪಿನಾಥ್, ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ. ಮತ್ತಿತರರು ಉಪಸ್ಥಿತರಿದ್ದರು.

Leave a Comment