ವಲಸೆ ನೀತಿ, ಆತಂಕ ಬೇಡ ಭಾರತಕ್ಕೆ ಯುಎಸ್ ಭರವಸೆ

ವಾಷಿಂಗ್ಟನ್, ಏ. ೨೧- ಅಮೆರಿಕಾದ ಪರಿಷ್ಕೃತ ವಲಸೆ ನೀತಿಯಿಂದ ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮ ಆತಂಕ ಪಡುವ ಅವಶ್ಯಕತೆ ಇಲ್ಲ. ಟ್ರಂಪ್ ಆಡಳಿತ ಪರಿಷ್ಕೃತ ಹೆಚ್ 1 ಬಿ ವೀಸಾದ ಮುಖ್ಯ ಉದ್ದೇಶ ಅರ್ಹತೆ ಆಧಾರದಲ್ಲಿಯ ವಲಸೆ ಮತ್ತು ಹೆಚ್ಚಿನ ಕೌಶಲ ಹೊಂದಿರುವವರಿಗೆ ಆದ್ಯತೆ ನೀಡುವುದಾಗಿದೆ ಎಂದು ಅಮೆರಿಕಾದ ವಾಣಿಜ್ಯ ಸಚಿವ ವಿಲ್ಬುರ್ ರೋಸ್ ಹೇಳಿದ್ದಾರೆ.

ಅಮೆರಿಕ ಭೇಟಿಯಲ್ಲಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಪರಿಷ್ಕೃತ ಹೆಚ್ 1 ಬಿ ವೀಸಾ ಕುರಿತಂತೆ ಭಾರತದ ಐಟಿ ಉದ್ಯಮ ಕ್ಷೇತ್ರದ ಆತಂಕ ಕುರಿತಂತೆ ಸಚಿವ ವಿಲ್ಬುರ್ ರೋಸ್‌ನೊಂದಿಗೆ ಗಂಭೀರವಾಗಿ ಚರ್ಚಿಸುತ್ತ ಅಮೆರಿಕಾದ ಆರ್ಥಿಕಾಭಿವೃದ್ಧಿಯಲ್ಲಿ ಭಾರತದ ಪರಿಣಿತರ ಕೊಡುಗೆಯನ್ನು ಮನದಟ್ಟು ಮಾಡಿದ್ದಾರೆ.

ಅಮೆರಿಕಾದಲ್ಲಿಯ ಆರ್ಥಿಕಾಭಿವೃದ್ಧಿ ಮತ್ತು ಐಟಿ ಉದ್ಯಮ ಬೆಳವಣಿಗೆಯಲ್ಲಿ ಭಾರತೀಯ ತಂತ್ರಜ್ಞರ ಕೊಡುಗೆ ಅಪಾರವಾಗಿದೆ.  ಇದರಿಂದಾಗಿ ಎರಡೂ ರಾಷ್ಟ್ರಗಳಿಗೆ ಇದು ಲಾಭದಾಯಕವಾಗಿದ್ದು, ಇದು ಈಗಿನಂತೆಯೇ ಮುಂದುವರೆಯಬೇಕು ಎಂದು ಜೇಟ್ಲಿ ಕೋರಿದ್ದಾರೆ.

ವಾರ್ಷಿಕ ಸಮಾವೇಶ

ವಾಷಿಂಗ್ಟನ್‌ನಲ್ಲಿ ನಡೆಯುವ ವಾರ್ಷಿಕ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್) ಮತ್ತು ವಿಶ್ವಬ್ಯಾಂಕ್ ಸಮಾವೇಶ ಭಾಗವಹಿಸಲು ನಿಯೋಗದೊಂದಿಗೆ ಆಗಮಿಸಿರುವ ಸಚಿವ ಜೇಟ್ಲಿ, ಅನ್ಯರಾಷ್ಟ್ರಗಳ ಹಣಕಾಸು ಸಚಿವರೊಂದಿಗೂ ದ್ವಿಪಕ್ಷೀಯ ಸಂಬಂಧಗಳ ಕುರಿತಂತೆ ಚರ್ಚಿಸುವವರಿದ್ದಾರೆ.

ಈಗಾಗಲೇ ಜೇಟ್ಲಿ ಅವರ ಸಭೆ ಅಮೆರಿಕ, ಫ್ರಾನ್ಸ್, ಇಂಡೋನೇಶಿಯಾ, ಸ್ವೀಡನ್ ದೇಶದ ಹಣಕಾಸು ಸಚಿವರೊಂದಿಗೆ ನಿಗದಿಯಾಗಿದೆ. ಅರುಣ್ ಜೇಟ್ಲಿ ಜೊತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗವೂ ಅಮೆರಿಕಾಗೆ ತೆರಳಿದ್ದು ನಿಯೋಗ ಮಟ್ಟದ ಚರ್ಚೆಗಳು ನಡೆಯಲಿವೆ ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳಿವೆ.

Leave a Comment