ವರ ಮಹಾಲಕ್ಷ್ಮಿ ಹಬ್ಬ : ಸಡಗರ ಸಂಭ್ರಮದಿಂದ ಆಚರಣೆ

ಕೆ.ಆರ್.ಪೇಟೆ, ಆ.25- ತಾಲೂಕಿನಾದ್ಯಂತ ಮಹಿಳೆಯರು ವರ ಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ಲಕ್ಷ್ಮೀ ವಿಗ್ರಹವನ್ನು ತಾವರೆ ಹೂವು ಹಾಗೂ ವಿವಿಧ ಪುಷ್ಪಗಳಿಂದ, ಬಗೆ ಬಗೆಯ ಹಣ್ಣುಗಳನ್ನಿಟ್ಟು ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ, ಚಿನ್ನ ಮತ್ತು ಬೆಳ್ಳೆಯ ಒಡವೆಗಳನ್ನು ಲಕ್ಷ್ಮಿ ವಿಗ್ರಹಕ್ಕೆ ತೊಡಿಸಿ, ಶಕ್ತಾನುಸಾರ ಪೂಜೆಗೆ ಹಣವನ್ನಿಟ್ಟು ಮಹಾಲಕ್ಷ್ಮೀಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಮನೆಗೆ ಬಂದ ಆಹ್ವಾನಿತ ಅತಿಥಿಗಳಿಗೆ ಪ್ರಸಾದ ವಿತರಣೆ ಮಾಡಿ ಪರಸ್ಪರ ವರಮಹಾಲಕ್ಷ್ಮೀ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತಾವರೆ ಹೂವಿನ ಬೆಲೆ 100ರಿಂದ 150ರೂಗಳಿಗೆ ಮಾರಾಟವಾದರೆ, ಸೇವಂತಿಗೆ ಹೂ 50ರಿಂದ 100ರೂಗಳಿಗೆ ಮಾರಾಟವಾಯಿತು. ಹಣ್ಣುಗಳು ಎಂದಿಗಿಂತ ತುಸು ಹೆಚ್ಚಾಗಿತ್ತು. ಆದರೂ ಸಹ ಭಕ್ತಾಧಿಗಳು ಹೂ, ಹಣ್ಣು ಖರೀದಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂದಿತು.
ತಾಲೂಕಿನ ವಿವಿಧ ಲಕ್ಷ್ಮೀ ದೇವಾಲಯಗಳಲ್ಲಿ ವಿಶೇಷ, ಪೂಜೆ, ಅಭಿಷೇಕ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಬೆಳಿಗ್ಗೆ 5.30ರಿಂದ ಸಂಜೆಯವರೆವಿಗೂ ನಡೆದವು.

Leave a Comment