ವರ್ಷಾಂತ್ಯಕ್ಕೆ ೩ ರಾಜ್ಯಗಳ ವಿಧಾನಸಭೆಗೆ ಚುನಾವಣೆ

ನವದೆಹಲಿ, ಸೆ. ೧೨- ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ವಿಧಾನಸಭೆಗಳಿಗೆ ಬರುವ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆಗಳಿದ್ದು, ಈ ಸಂಬಂಧ ಚುನಾವಣಾ ಆಯೋಗ ಇಂದು ಸಭೆ ಸೇರಿ ಪೂರ್ವಸಿದ್ಧತೆಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿತು.
ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿ ಮೈತ್ರಿಕೂಟ ಸರ್ಕಾರ ಅಧಿಕಾರದಲ್ಲಿದ್ದು, ನವೆಂಬರ್ ತಿಂಗಳಲ್ಲಿ ತನ್ನ ಅವಧಿಯನ್ನು ಪೂರೈಸಲಿದೆ. ಅದೇ ರೀತಿ ಹರಿಯಾಣ ಮತ್ತು ಜಾರ್ಖಂಡ್ ವಿಧಾನಸಭೆಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಬೇಕಾಗಿದೆ. ಈ ಮೂರೂ ರಾಜ್ಯಗಳಲ್ಲಿ ವರ್ಷಾಂತ್ಯಕ್ಕೆ ಮೊದಲೇ ಚುನಾವಣೆ ನಡೆಸಲು ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ೨೮೮ ಸದಸ್ಯ ಬಲ ಹೊಂದಿರುವ ಮಹಾರಾಷ್ಟ್ರದಲ್ಲಿ ಈಗಾಗಲೇ ಚುನಾವಣಾ ಜ್ವರ ಹೆಚ್ಚಾಗುತ್ತಿದೆ. ೯೦ ಸ್ಥಾನಗಳನ್ನು ಹೊಂದಿರುವ ಹರಿಯಾಣ ಮತ್ತು ೮೧ ಸಂಖ್ಯಾಬಲದ ಜಾರ್ಖಂಡ್ ವಿಧಾನಸಭೆಗಳಿಗೂ ಚುನಾವಣೆ ನಡೆಸಲು ಆಯೋಗ ಮುಂದಾಗಿದೆ.
ಈ ಮೂರೂ ರಾಜ್ಯ ವಿಧಾನಸಭೆಗಳಿಗೆ ೨೦೧೪ರ ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಈ ವರ್ಷದ ಅಕ್ಟೋಬರ್ ಅಂತ್ಯದೊಳಗೆ ಚುನಾವಣೆ ನಡೆಯಬೇಕಾಗಿದೆ. ಈ ಮೂರೂ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಭಾರತೀಯ ಜನತಾ ಪಕ್ಷ ಹಾಗೂ ಅದರ ಮಿತ್ರಪಕ್ಷ ಶಿವಸೇನೆ ಈಗಾಗಲೇ ಪೂರ್ವತಯಾರಿ ಮಾಡಿಕೊಳ್ಳುತ್ತಿವೆ.
ಇದರ ನಡುವೆ ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಅವರ ನೇತೃತ್ವದ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ಸೀಟು ಹಂಚಿಕೆ ಬಗ್ಗೆ ಸೂತ್ರವೊಂದನ್ನು ರೂಪಿಸಲು ಮುಂದಾಗಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ೨೮೮ ಸ್ಥಾನಗಳ ಪೈಕಿ ಬಿಜೆಪಿ ೧೨೨ ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಲಾ ೧೩೫ ಸೀಟುಗಳಿಗೆ ಬಿಜೆಪಿ ಮತ್ತು ಶಿವಸೇನೆ ಸ್ಪರ್ಧೆ ಮಾಡಲು ಉದ್ದೇಶಿಸಿದ್ದು, ಉಳಿದ ೧೮ ಸೀಟುಗಳನ್ನು ಆರ್‌ಪಿಐನಂತಹ ಸಣ್ಣಪುಟ್ಟ ಪಕ್ಷಗಳಿಗೆ ಬಿಟ್ಟುಕೊಡಲು ಈ ಪಕ್ಷಗಳ ನಾಯಕರು ಚಿಂತನೆ ನಡೆಸಿದ್ದಾರೆ.
ದಕ್ಷಿಣ ಭಾರತದ ಅತಿದೊಡ್ಡ ರಾಜ್ಯವೆಂಬ ಖ್ಯಾತಿಗೆ ಪಾತ್ರವಾಗಿರುವ ಮಹಾರಾಷ್ಟ್ರದಲ್ಲಿ ಶತಾಯ – ಗತಾಯ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಮಿತ್ರಪಕ್ಷ ಶಿವಸೇನೆ ಗಂಭೀರ ಚಿಂತನೆ ನಡೆಸಿವೆ. ಜಾರ್ಖಂಡ್ ಮತ್ತು ಹರಿಯಾಣದಂತಹ ಸಣ್ಣರಾಜ್ಯಗಳಲ್ಲೂ ಬಿಜೆಪಿ ಅಧಿಕಾರ ಹಿಡಿಯಲು ಹವಣಿಸುತ್ತಿದೆ.

Leave a Comment