ವರ್ಷದೊಳಗೆ ಭಾರತ ಬಯಲು ಶೌಚಮುಕ್ತ ರಾಷ್ಟ್ರ: ಜಿಗಜಿಣಗಿ

ಕಲಬುರಗಿ ಸ 11:ಬರುವ ವರ್ಷದ ಅಕ್ಟೋಬರ್ 2 ರೊಳಗೆ ದೇಶವನ್ನು ಬಯಲು ಶೌಚ ಮುಕ್ತ ರಾಷ್ಟ್ರವನ್ನಾಗಿ ಘೋಷಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ಹೇಳಿದರು.

ಅವರಿಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸ್ವಚ್ಛ ಭಾರತ ಯೋಜನೆ ಪ್ರಾರಂಭಿಸಿದ ದಿನದಿಂದ      ಇಲ್ಲಿಯತನಕ ದೇಶದಲ್ಲಿ 8.40 ಕೋಟಿ ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ.ಕರ್ನಾಟಕದಲ್ಲಿ  ಈವರೆಗೆ ಶೇ 96 ರಷ್ಟು ಸಾರ್ವಜನಿಕರು ಶೌಚಾಲಯ ಹೊಂದಿದ್ದಾರೆ.20 ಜಿಲ್ಲೆಗಳನ್ನು  ಬಯಲು ಶೌಚ ಮುಕ್ತ ಪ್ರದೇಶಗಳೆಂದು ಘೋಷಿಸಲಾಗಿದೆ ಎಂದರು.

ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ 2022 ರೊಳಗೆ ಶೇ 90 ರಷ್ಟು ಗ್ರಾಮೀಣ ಪ್ರದೇಶಕ್ಕೆ ಪೈಪ್ ಲೈನ್ ಮೂಲಕ ನೀರು ಪೂರೈಕೆ ಮಾಡುವದು ಮತ್ತು ಶೇ 80 ರಷ್ಟು ಮನೆಗಳಿಗೆ ನಳದ ಸಂಪರ್ಕ ಕಲ್ಪಿಸುವ ಉದ್ದೇಶಹೊಂದಲಾಗಿದೆ. 2022 ರೊಳಗೆ ಪ್ರತಿಯೊಬ್ಬ ಗ್ರಾಮೀಣ ಪ್ರಜೆಗೆ ಪ್ರತಿದಿನಕ್ಕೆ 70 ಲೀಟರ್ ನೀರು ಒದಗಿಸುವ ಸದುದ್ದೇಶವಿದೆ. ಈ ಸಾಲಿನಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಗೆ 7000 ಕೋಟಿ ರೂ ಮೀಸಲಿಡಲಾಗಿದೆ ಎಂದು ವಿವರಿಸಿದರು.

ಈ ಸಾಲಿಗಾಗಿ ಕೇಂದ್ರವು ರಾಜ್ಯದ ಗ್ರಾಮೀಣ ಕುಡಿಯುವ ನೀರು ಯೋಜನೆಗೆ 453 ಕೋಟಿ ರೂ ಬಿಡುಗಡೆ ಮಾಡಿದ್ದು,ಅದರಲ್ಲಿ ರಾಜ್ಯ ಸರ್ಕಾರ ಕೇವಲ 272 ಕೋಟಿ ಮಾತ್ರ ಖರ್ಚು ಮಾಡಿದೆ.ರಾಜ್ಯದಲ್ಲಿ 6195 ಯೋಜನೆಗಳನ್ನು ಬಾಹ್ಯ ಜಲಮೂಲಗಳಿಂದ ಮತ್ತು 3,10 158 ಬೋರವೆಲ್‍ಗಳ ಮೂಲಕ ಕುಡಿಯುವನೀರು ಪೂರೈಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿ.ಜಿ ಪಾಟೀಲ,ದೊಡ್ಡಪ್ಪಗೌಡ ಪಾಟೀಲ ನರಿಬೋಳ, ದತ್ತಾತ್ರೇಯ ಪಾಟೀಲ ರೇವೂರ,ಕೆ.ಬಿ ಶಾಣಪ್ಪ,ದಯಾಘನ ಧಾರವಾಡಕರ್,ಇಂದಿರಾಶಕ್ತಿ,ಅರವಿಂದ ನವಲೆ,ವಿಜಯಕುಮಾರ ಅಡಕಿ, ರಾಜು ವಾಡೇಕರ್,ಸಂಗಣ್ಣ ಇಜೇರಿ ಸೇರಿದಂತೆ ಹಲವರಿದ್ದರು

ಬಾಕ್ಸ್:

ಜಗಳದಲ್ಲಿ ಬಿಜಿ

ರಾಜ್ಯದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷದವರು ತಮ್ಮ ತಮ್ಮ  ಜಗಳಗಳಲ್ಲಿ ಬಿಜಿಯಾಗಿದ್ದು ಜನ ಬದುಕಿದ್ದಾರೋ ಇಲ್ಲವೋ ಎಂದು ಕೇಳುವವರಿಲ್ಲದಂತಾಗಿದೆ.ಹಲವಾರು ಜಿಲ್ಲೆಗಳು ಮಳೆಯಿಲ್ಲದೇ ನಲುಗಿ ಹೋಗಿದ್ದು, ಸಂಕಷ್ಟ ಪಡುವವರನ್ನು ಭೇಟಿಯಾಗಲು ಇವರಿಗೇನು ಕಷ್ಟ ?ಇವರ ವರ್ತನೆ ಕಂಡು ನಾಚಿಕೆಯಾಗುತ್ತಿದೆ.

ನಮ್ಮ ಪಕ್ಷ ಆಪರೇಷನ್ ಕಮಲ ನಡೆಸುತ್ತಿಲ್ಲ. ತಾವಾಗಿಯೇ ಪಕ್ಷಕ್ಕೆ ಬರುವವರನ್ನು ಬೇಡ ಎನ್ನಲಾಗುವದಿಲ್ಲ.ಲೋಕಸಭೆ ಚುನಾವಣೆ ಸ್ಪರ್ಧೆಯ ವಿಚಾರವಾಗಿ ಪಕ್ಷದ ಹಿರಿಯರು ತೆಗೆದು ಕೊಳ್ಳುವ ತೀರ್ಮಾನಕ್ಕೆ ಬದ್ಧ

ರಮೇಶ ಜಿಗಜಿಣಗಿ,

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ..

Leave a Comment