‘ವರ್ಗಾವಣೆಗೊಂಡರೂ ಅಧಿಕಾರ ಹಸ್ತಾಂತರಿಸದ ಪಿಡಿಓ’

ಪುತ್ತೂರು, ಸೆ.೯- ತಾಲೂಕಿನ ಮುಂಡೂರು ಗ್ರಾಮ ಪಂಚಾಯಿತಿಯಲ್ಲಿ ಒಂದೂವರೆ ತಿಂಗಳಿನಿಂದ ಪಿಡಿಒ ಇಲ್ಲದೆ ಅರಾಜಕತೆ ಸೃಷ್ಟಿಯಾಗಿದೆ. ತಕ್ಷಣ ಪಂಚಾಯಿತಿಗೆ ಕಾಯಂ ಪಿಡಿಒ ನೇಮಕ ಮಾಡಬೇಕು. ಇನ್ನೂ ಒಂದು ತಿಂಗಳು ಇದೇ ಅಸ್ಥಿರತೆ ಇದ್ದರೆ ನಾನು ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗ್ರಾಪಂ ಸದಸ್ಯ ಶಿವನಾಥ ರೈ ಮೇಗಿನಗುತ್ತು ಹೇಳಿದರು.
ಅವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿ ಪಿಡಿಒ ಸುಜಾತ ಕಳೆದ ೯ ವರ್ಷಗಳಿಂದ ಇಲ್ಲೇ ಇದ್ದಾರೆ. ಈ ಮೊದಲು ಮೂರು ಬಾರಿ ವರ್ಗವಾದರೂ ಅದನ್ನು ರದ್ದು ಮಾಡಲಾಗಿದ್ದು, ಈ ಬಾರಿ ಇನ್ನೊಮ್ಮೆ ವರ್ಗವಾಗಿದೆ. ಆಗಸ್ಟ್ ೪ರಂದು ಅವರಿಗೆ ರಿಲೀವ್ ಆರ್ಡರ್ ಬಂದಿದ್ದು, ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕಕ್ಕೆ ಆದೇಶ ನೀಡಲಾಗಿದೆ. ಆದರೆ ಅವರು ಅಲ್ಲಿಗೆ ಹೋಗಿಲ್ಲ. ಮೇಲಧಿಕಾರಿಗಳನ್ನು ಕೇಳುವಾಗ ರಜೆಯ ಮೇಲೆ ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮುಂಡೂರು ಗ್ರಾಪಂಗೆ ನೆಕ್ಕಿಲಾಡಿ ಪಿಡಿಓ ಅವರನ್ನು ಪ್ರಭಾರ ಎಂದು ಕಳುಹಿಸಲಾಗಿದ್ದರೂ ಅವರಿಗೆ ಅಧಿಕಾರ ಹಸ್ತಾಂತರ ಮಾಡಿಲ್ಲ. ಇದಾದ ಬಳಿಕ ಪಕ್ಕದ ಕೆದಂಬಾಡಿ ಗ್ರಾಪಂನಿಂದ ಸುನಂದಾ ಅವರನ್ನು ಕಳುಹಿಸಿದ್ದರೂ ಅವರಿಗೂ ಅಧಿಕಾರ ಹಸ್ತಾಂತರ ಮಾಡಿಲ್ಲ.
ಇಲ್ಲಿ ಪಿಡಿಒ ಇಲ್ಲದೆ ಈಗ ಅರಾಜಕತೆ ಸೃಷ್ಟಿಯಾಗಿದೆ. ಯಾವುದೇ ಪಾವತಿ, ಅನುಮೋದನೆ, ಅಂಗೀಕಾರಗಳಿಗೆ ಪಿಡಿಓ ಅವರ ತಂಬ್ ಬೇಕಾದ ಕಾರಣ ಯಾವ ಕೆಲಸವೂ ಆಗುತ್ತಿಲ್ಲ. ಜನ ಸಮಸ್ಯೆಯಿಂದ ಬಳಲುವಂತಾಗಿದೆ ಎಂದವರು ನುಡಿದರು.
ಸುಜಾತ ಅವರ ಮೇಲೆ ನಮಗೆ ವೈಯಕ್ತಿಕ ದ್ವೇಷವಿಲ್ಲ. ಅವರೇನಾದರೂ ಅಪಾರ ಸಾಧನೆ ಮಾಡಿದ್ದರೆ ಮತ್ತೆ ಅವರೇ ಬೇಕು ಎಂದು ನಾವು ಕೂಡ ಹೇಳುತ್ತಿದ್ದೆವು. ಆದರೆ ಅಂಥ ಸಾಧನೆ ಏನೂ ಅವರು ಮಾಡಿಲ್ಲ. ಅವರ ವಿರುದ್ಧ ವ್ಯಾಪಕ ಜನಾಕ್ರೋಶವಿದೆ. ಅದರೆ ಇತರ ಸದಸ್ಯರು ಮಾತ್ರ ಅಧ್ಯಕ್ಷರ ಆಣತಿಗೆ ತಲೆಬಾಗುತ್ತಿದ್ದಾರೆ. ಪಂಚಾಯಿತಿಯಲ್ಲಿ ತೆಗೆದುಕೊಂಡ ನಿರ್ಣಯವನ್ನೇ ಸುಜಾತ ತಿರುಚುತ್ತಾರೆ. ಕೇಳಿದರೆ ಅಧ್ಯಕ್ಷರು ಹೇಳಿದಂತೆ ಮಾಡಿದ್ದೇನೆ ಎನ್ನುತ್ತಾರೆ. ಅಧ್ಯಕ್ಷರ ಆಣತಿಯಂತೆ ಕೆಲಸ ಮಾಡುತ್ತಾ, ನಿರ್ಣಯವನ್ನೇ ತಿರುಚುವ ಪಿಡಿಒ ನಮಗೆ ಬೇಡ. ಒಂದು ವೇಳೆ ಅವರೇ ಮತ್ತೆ ಕಾಯಂ ಪಿಡಿಒ ಆಗಿ ಬಂದರೂ ಅವರು ತಮ್ಮ ಹಿಂದಿನ ಚಾಳಿ ಬಿಟ್ಟರೆ ನಾವು ಖಂಡಿತಾ ಬೆಂಬಲಿಸುತ್ತೇವೆ ಎಂದು ನುಡಿದರು.
ಇತ್ತೀಚೆಗೆ ನಡೆದ ಗ್ರಾಪಂ ಸಭೆಯಲ್ಲಿ ನನ್ನ ಅನುಪಸ್ಥಿತಿಯಲ್ಲಿ ಇಬ್ಬರು ಸದಸ್ಯರಾದ ರಾಮಚಂದ್ರ ಸೊರಕೆ ಮತ್ತು ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನನಗೆ ಅಭಿವೃದ್ಧಿ ಚಿಂತನೆ ಇಲ್ಲ ಎಂದು ಆಪಾದಿಸಿದ್ದಾರೆ. ಇದರಲ್ಲಿ ಹುರುಳಿಲ್ಲ. ನಾನು ಮುಂಡೂರು ಗ್ರಾಪಂಗೆ ೫೫ ಲಕ್ಷ ರೂ.ಗಳ ಯೋಜನೆಯನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ನೇತೃತ್ವದಲ್ಲಿ ತರಿಸಿದ್ದೇನೆ. ೯ ಮಂದಿಗೆ ಗಂಗಾ ಕಲ್ಯಾಣ ಯೋಜನೆ ಮಂಜೂರು ಮಾಡಿಸಿದ್ದೇನೆ. ಸುಳ್ಳು ಆರೋಪ ಮಾಡುವವರು ಯಾವುದಾದರೂ ಕ್ಷೇತ್ರಕ್ಕೆ ಬಂದು ಹೇಳಲಿ ಎಂದು ಸವಾಲು ಹಾಕಿದರು.
ಗ್ರಾಪಂ ಸದಸ್ಯ ಬಾಬು ಕಲ್ಲಗುಡ್ಡೆ, ಕಾಂಗ್ರೆಸ್ ಮುಖಂಡ ಸಂತೋಷ್ ಭಂಡಾರಿ ಚಿಲ್ಮೆತ್ತಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Comment