ವರುಣನ ಅಬ್ಬರ ೫೨೬ ಮಂದಿ ಸ್ಥಳಾಂತರ

ಬಂಟ್ವಾಳ, ಆ. ೧೮- ಕಳೆದ ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ಬಂಟ್ವಾಳ ವ್ಯಾಪ್ತಿಯ ವಿವಿಧ ಪರಿಸರದಲ್ಲಿ ಕಾಣಿಸಿದ್ದ ನೆರೆ ನೀರು ಶುಕ್ರವಾರ ಕೊಂಚ ಇಳಿಮುಖವಾಗಿದೆ. ತಾಲೂಕಿನಲ್ಲಿ ನಿನ್ನೆ ಮಳೆ ಕಡಿಮೆಯಾಗಿದ್ದು, ೮.೩ ಮೀಟರ್ ಮಟ್ಟದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು, ಪ್ರವಾಹ ತಗ್ಗಿದೆ.
ತಾಲೂಕು ಆಡಳಿತದಿಂದ ಪಾಣೆಮಂಗಳೂರು ಶಾರದಾ ಪ್ರೌಢಶಾಲೆ, ಬಂಟ್ವಾಳದ ಹಳೆ ಪ್ರವಾಸಿ ಮಂದಿರ, ನಾವೂರು ಜಿಲ್ಲಾ ಪಂಚಾಯತ್ ಶಾಲೆಗಳಲ್ಲಿ ಒಟ್ಟು ಮೂರು ಕಡೆಗಳಲ್ಲಿ ಗಂಜಿಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳ ಪೈಕಿ ಬಂಟ್ವಾಳದ ಹಳೆ ಪ್ರವಾಸಿ ಮಂದಿರದಲ್ಲಿ ಸುಮಾರು ೪೦ ಮಂದಿ ಆಶ್ರಯ ಪಡೆದಿದ್ದು, ಅವರಿಗೆ ಆಡಳಿತ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಿದೆ. ೧೦೧ ಮನೆಗಳ ೫೩೯ ಜನರ ಸ್ಥಳಾಂತರ ಮಾಡಲಾಗಿದೆ.
ನೇತ್ರಾವತಿ ನೆರೆಯಿಂದಾಗಿ ಒಟ್ಟು ೧೦೧ ಮನೆಗಳ ೫೩೯ ಮಂದಿಯನ್ನು ಆಡಳಿತ ಸುರಕ್ಷಿತ ಜಾಗಗಳಿಗೆ ಸ್ಥಳಾಂತರಗೊಳಿಸಿದ್ದಾರೆ. ಇವರಲ್ಲಿ ೩೮೭ ಮಂದಿಯನ್ನು ಇತರೆ ಸ್ಥಳಗಳಲ್ಲಿ ವಾಸ್ತವ್ಯ ಕಲ್ಪಿಸಿದರೆ, ಗಂಜಿಕೇಂದ್ರಗಳಲ್ಲಿ ೧೫೨ ಮಂದಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಾಣೆಮಂಗಳೂರು ಗ್ರಾಮದಿಂದ ಗುಡ್ಡೆಯಂಗಡಿಯ ೨೪, ಬೋಗೋಡಿಯ ೪೮, ಆಲಡ್ಕದ ೧೦೫, ಬಂಡ್ಲೆಗುಡ್ಡೆಯ ೩೬, ಸುಣ್ಣದಗೂಡಿನ ೩೨ ಸೇರಿ ಒಟ್ಟು ೪೬ ಮನೆಗಳನ್ನು ಸ್ಥಳಾಂತರಿಸಲಾಗಿದೆ. ಬಿ.ಮೂಡದ ತಲಪಾಡಿಯ ೭ ಮನೆಗಳ ೬೫ ಮಂದಿ, ನಂದರಬೆಟ್ಟುವಿನ ೨೦ ಮನೆಗಳ ೧೦೫ ಮಂದಿ, ಬಸ್ತಿಪಡ್ಪುವಿನ ೯ ಮನೆಗಳ ೪೫ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಬರಿಮಾರು ಗ್ರಾಮದ ಕಡವಿನಬಳಿಯ ೪ ಮನೆಗಳ ೨೫ ಮಂದಿ, ತುಂಬೆ ಗ್ರಾಮದ ರಾಮಲ್ ಕಟ್ಟೆಯ ೪ ಮನೆಗಳ ೧೮ ಮಂದಿ, ಬಿ.ಕಸ್ಬಾ ಗ್ರಾಮದ ಬಡ್ಡಕಟ್ಟೆಯ ೩ ಮನೆಗಳ ೧೨ ಮಂದಿ ಹಾಗೂ ನಾವೂರು ಗ್ರಾಮದ ಪೆರ್ಲ ಪ್ರದೇಶದ ೮ ಮನೆಗಳ ೨೪ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಬಂಟ್ವಾಳ ಪುರಸಭೆ ಮತ್ತು ತಾಲೂಕು ಆಡಳಿತ ವತಿಯಿಂದ ಎಲ್ಲ ಸಂತ್ರಸ್ತರಿಗೂ ಊಟ, ವಸತಿಗೆ ಸುರಕ್ಷಿತವಾದ ನೆಲೆಯನ್ನು ಒದಗಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ತುಂಬೆ ಡ್ಯಾಂ ವೀಕ್ಷಣೆಗೆ ಮಂಗಳೂರು ಮೇಯರ್ ಭಾಸ್ಕರ ಮೊಯ್ಲಿ ಆಗಮಿಸಿದ್ದು, ಪೂರಕ ಮಾಹಿತಿ ಪಡೆದರು. ಬಂಟ್ವಾಳದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೆಸ್ಕಾಂ ವಿದ್ಯುತ್ ನಿಲುಗಡೆಗೊಳಿಸಿರುವುದರಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಮೇಯರ್ ಭಾಸ್ಕರ ಮೊಯ್ಲಿ ಸುದ್ದಿಗಾರರಿಗೆ ಈ ಸಂದರ್ಭ ಹೇಳಿದರು. ತುಂಬೆ ವೆಂಟೆಡ್ ಡ್ಯಾಂ ಸಮೀಪ ಹಿನ್ನೀರು ಪ್ರದೇಶದಲ್ಲಿ ಬಂಟ್ವಾಳ ಸಬ್ಸ್ಟೇಷನ್ನಿಂದ ತುಂಬೆ ಪಂಪ್ ಹೌಸ್ಗೆ ೩೩ ಕೆವಿ ವಿದ್ಯುತ್ ಲೈನ್ ಎಳೆಯಲಾಗಿದೆ. ನೇತ್ರಾವತಿ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾದ ಕಾರಣ ವಿದ್ಯುತ್ ಸರಬರಾಜು ನಿಲ್ಲಿಸಲಾಯಿತು. ಇದರಿಂದ ತುಂಬೆಯಲ್ಲಿ ಪಂಪಿಂಗ್ ಸಾಧ್ಯವಾಗದೆ ಗುರುವಾರ ನಗರಕ್ಕೆ ನೀರು ಸರಬರಾಜಿನಲ್ಲಿ ಅಡಚಣೆ ಉಂಟಾಯಿತು ಎಂದು ಮೇಯರ್ ವಿವರಿಸಿದರು.
ಗುರುವಾರ ಬೆಳಗಿನ ಜಾವ ೯ ಮೀಟರ್ ತಲುಪಿ, ಸಂಜೆಯ ವೇಳೆ ೧೦.೨ ಮೀಟರ್ ಆಗಿತ್ತು. ತಗ್ಗು ಪ್ರದೇಶಗಳಾದ ಜಕ್ರಿಬೆಟ್ಟು, ಬಡ್ಡಕಟ್ಟೆ, ಪಾಣೆಮಂಗಳೂರಿನ ಆಲಡ್ಕ ಸಹಿತ ನದಿ ತೀರದ ರಸ್ತೆಗಳಲ್ಲಿ ನೇತ್ರಾವತಿ ನದಿ ನೀರು ಹರಿದಿದ್ದು, ಸ್ಥಳೀಯರು ಬೇರೆಡೆಗೆ ಸ್ಥಳಾಂತರಗೊಂಡಿದ್ದರು. ರಾತ್ರಿಯಾಗುತ್ತಿದ್ದಂತೆ ನೀರಿನ ಮಟ್ಟ ೧೦.೬೫ಕ್ಕೆ ಏರತೊಡಗಿತ್ತು. ಆದರೆ ಶುಕ್ರವಾರ ಬೆಳಗ್ಗಿನ ಜಾವವೇ ನದಿ ನೀರು ಇಳಿಮುಖವಾಯಿತು. ಮಧ್ಯಾಹ್ನದ ವೇಳೆಗೆ ೮.೮ ಮೀಟರ್ ನಲ್ಲಿ ನೇತ್ರಾವತಿ ಹರಿಯುತ್ತಿದ್ದು, ಅಪಾಯದ ಮಟ್ಟಕ್ಕಿಂತ ಕಡಿಮೆಯಾಗುತ್ತಿದೆ. ಸಂಜೆ ವೇಳೆ ೮.೩ ಮೀಟರ್ಗೆ ತಲುಪಿದ್ದು, ವಿವಿಧ ಪ್ರದೇಶಗಳಿಗೆ ನುಗ್ಗಿದ್ದ ನೆರೆ ನೀರು ತಗ್ಗಿದೆ. ಈಗಾಗಲೇ ಶಾರದಾ ಹೈಸ್ಕೂಲು, ಬಂಟ್ವಾಳ ಐಬಿಗಳಲ್ಲಿರುವ ಗಂಜಿ ಕೇಂದ್ರಗಳ ಸಂತ್ರಸ್ತರಿಗೆ ಆಡಳಿತ ಊಟ, ವಸತಿ ವ್ಯವಸ್ಥೆ ಮಾಡಿದ್ದು, ಒಂದೆರಡು ದಿನಗಳಲ್ಲಿ ಅವರು ಮನೆಗೆ ಮರಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Comment