ವರನಟ ಡಾ.ರಾಜ್‌ಕುಮಾರ್ ಜನ್ಮ ದಿನ: ಮುಖ್ಯಮಂತ್ರಿ ಸೇರಿ ಗಣ್ಯರ ನಮನ

ಬೆಂಗಳೂರು, ಏ.24 – ವರನಟ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಅವರಿಗೆ ಗೌರವ ಸಲ್ಲಿಸಿದ್ದಾರೆ.

ವರನಟ ಡಾ.ರಾಜ್‌ಕುಮಾರ್ ಕನ್ನಡ ನಾಡು, ನುಡಿಗೆ ಸಲ್ಲಿಸಿದ ಅಮೋಘ ಸೇವೆ ಅವಿಸ್ಮರಣೀಯ. ಕನ್ನಡ ನಾಡು, ನುಡಿಗಳ ಬಗ್ಗೆ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸುವುದೇ ಅವರ ಹುಟ್ಟುಹಬ್ಬದಂದು ನಾವು ಸಲ್ಲಿಸುವ ನಿಜವಾದ ಗೌರವ ಎಂದು ಮುಖ್ಯಮಂತ್ರಿ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.

ನಟ ಸಾರ್ವಭೌಮ – ಕರ್ನಾಟಕ ರತ್ನ ಡಾ. ರಾಜಕುಮಾರರ ಜನ್ಮದಿನದಂದು ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸೋಣ. ತಾಯಿ ಭುವನೇಶ್ವರಿಯ ಸೇವೆಗೆ ಕರೆ ಬಂದಾಗಲೆಲ್ಲ ಎದ್ದು ಬಂದ ಮಹಾನುಭಾವ ರಾಜಣ್ಣನವರು. ಮೂರು ತಲೆಮಾರಿನ ಕನ್ನಡಿಗರಿಗೆ ಮೌಲ್ಯ ತುಂಬಿದ ಮನರಂಜನೆ ನೀಡಿದ ಅವರನ್ನು ಆದರದಿಂದ ನೆನೆಯೋಣ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರು ಕನ್ನಡ ಸಂಸ್ಕೃತಿಗೆ ನೀಡಿದ ಅವಿಸ್ಮರಣೀಯ‌ ಕೊಡುಗೆಯನ್ನು ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಮೆಲುಕು ಹಾಕೋಣ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ‘ಅಭಿಮಾನಿಗಳೇ ದೇವರು’ ಎಂದು ಬಣ್ಣಿಸಿದ ವರನಟ ಡಾ. ರಾಜಕುಮಾರ್ ಅವರ ಜನುಮ ದಿನ ಇಂದು. ಅವರ ನೆನಪು ಎಂದೆಂದಿಗೂ ಅಮರ. ನಾಡುನುಡಿಯ ಬಗ್ಗೆ ಅವರ ನಿಲುವು ಅನುಕರಣೀಯ. ಕನ್ನಡದ ಅಸ್ಮಿತೆ ಮತ್ತು ಆದರ್ಶವಾಗಿದ್ದ ರಾಜ್ ಅವರ ಸದಭಿರುಚಿಯ ಸಿನಿಮಾಗಳನ್ನು ನೋಡಿ ನಾನು, ನನ್ನಂತಹ ಲಕ್ಷಾಂತರ ಮಂದಿ ಬದುಕಿನಲ್ಲಿ ಸ್ಫೂರ್ತಿ ಕಂಡವರು. ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಇಂತಹ ಮಹಾ ಚೇತನಕ್ಕೆ ನನ್ನ ಪ್ರಣಾಮಗಳು ಎಂದು ತಿಳಿಸಿದ್ದಾರೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ಕನ್ನಡ ನಾಡಿನ ಸಮಸ್ತ ಜನತೆಗೆ ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಶುಭಾಶಯಗಳು. ಅವರ ಕಲಾವಂತಿಕೆ, ಹೃದಯವಂತಿಕೆ, ವಿನಯವಂತಿಕೆ ವ್ಯಕ್ತಿತ್ವಕ್ಕೆ ನನ್ನ ಸಹಸ್ರ ನಮನಗಳು ಎಂದು ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್‌ ಮಾಡಿ, ಕನ್ನಡ ಚಿತ್ರರಂಗ ಮಾತ್ರವಲ್ಲ, ಕನ್ನಡನಾಡು ಎಂದೂ ಮರೆಯದ ಸಾಂಸ್ಕೃತಿಕ ಶಕ್ತಿ ಎಂದರೆ ಕನ್ನಡಿಗರ ಕಣ್ಮಣಿ, ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್! ಕನ್ನಡಿಗರ ಹೃದಯ ಸಾಮ್ರಾಜ್ಯವನ್ನು ಗೆದ್ದ ಡಾ.ರಾಜ್ ಅವರ ಕಲಾ ಪ್ರೌಢಿಮೆಯ ಜೊತೆಗೆ ಅವರ ಜೀವನ ಮೌಲ್ಯಗಳೂ ಕೂಡ ಆದರ್ಶ, ಅನುಕರಣೀಯ. ಸಮಸ್ತ ಕನ್ನಡಿಗರಿಗೂ ಡಾ.ರಾಜ್ ಕುಮಾರ್ ಜನ್ಮದಿನದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಟ್ವೀಟ್‌ ಮಾಡಿ, ಕನ್ನಡ ಕಲಾರಂಗದ ಆರಾಧ್ಯ ದೈವ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಹುಟ್ಟಿದ ದಿನದಂದು ತಮ್ಮೆಲ್ಲರಿಗೂ ಶುಭಾಶಯಗಳು. ಅಣ್ಣಾವ್ರ ಪಾತ್ರಗಳು ಮತ್ತು ಸರಳ ವ್ಯಕ್ತಿತ್ವ ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದು ತಿಳಿಸಿದ್ದಾರೆ.

ಸಚಿವ ಜಗದೀಶ್‌ ಶೆಟ್ಟರ್ ಟ್ವೀಟ್ ಮಾಡಿ, ಕನ್ನಡ ಭಾಷೆಗೆ, ಸಂಸ್ಕೃತಿಗೆ, ಸಿನಿಮಾ ರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ, ನಟ ಸಾರ್ವಭೌಮ, ಕರ್ನಾಟಕ ರತ್ನ ಡಾ. ರಾಜ್‌ ಕುಮಾರ್ ಹುಟ್ಟುಹಬ್ಬದಂದು ಶತಕೋಟಿ ನಮನಗಳು ಎಂದು ತಿಳಿಸಿದ್ದಾರೆ.

Leave a Comment