ವರದಕ್ಷಿಣೆ ಕಿರುಕುಳ: ಪತಿ, ಅತ್ತೆ-ಮಾವನಿಗೆ ಜೈಲು ಶಿಕ್ಷೆ

ತುಮಕೂರು, ಆ. ೩೧- ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಗಂಡ ಮತ್ತು ಆತನ ಪೋಷಕರಿಗೆ ಇಲ್ಲಿನ ಪ್ರಧಾನ ಮತ್ತು 1ನೇ ಜೆಎಂಎಫ್‌ಸಿ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರದ ಬಡ್ಡಿಹಳ್ಳಿಯ ಮುರುಳೀಧರ ಹಾಗೂ ಆತನ ಪೋಷಕರಾದ ಮಂಗಳಮ್ಮ, ನರಸಿಂಹಮೂರ್ತಿ ಎಂಬುವರೇ ಶಿಕ್ಷೆಗೆ ಒಳಗಾಗಿರುವವರು.
ಮುರುಳೀಧರನ ಜತೆ ಚೈತನ್ಯ ಅವರ ವಿವಾಹ ನಡೆದಿತ್ತು. ಅವರಿಗೆ ಒಂದು ವರ್ಷದ ಮಗು ಸಹ ಇದ್ದು, ಈ ನಡುವೆ ಮುರುಳೀಧರ, ಚೈತನ್ಯ ಅವರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದು, ತವರಿನಿಂದ 1 ಲಕ್ಷ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದ. ಇದಕ್ಕೆ ಆತನ ಪೋಷಕರು ಸಹ ಕುಮ್ಮಕ್ಕು ನೀಡಿದ್ದರೆನ್ನಲಾಗಿದೆ.
ಈ ಬಗ್ಗೆ ಚೈತನ್ಯ ಕ್ಯಾತ್ಸಂದ್ರ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ಅಂದಿನ ಪೊಲೀಸ್ ಅಧಿಕಾರಿ ಕೆ.ಆರ್. ನಾಗರಾಜು ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಮೊದಲನೇ ಆರೋಪಿ ಮುರುಳೀಧರನಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, ಎರಡು ಮತ್ತು 3ನೇ ಆರೋಪಿಗಳಿಗೆ 1 ವರ್ಷ ಜೈಲು ಹಾಗೂ ತಲಾ 2 ಸಾವಿರ ರೂ. ದಂಡವನ್ನು ನ್ಯಾಯಾಧೀಶರಾದ ಕೆ.ಎನ್. ನಾಗೇಶ್ ವಿಧಿಸಿ ತೀರ್ಪಿತ್ತಿದ್ದಾರೆ.

Leave a Comment