ವಯಸ್ಸಾದ್ರೆ ಅಭಿನಯಿಸಬಾರದೇನು? ಟ್ವೀಟಿಗನಿಗೆ ತಿರುಗೇಟು ಕೊಟ್ಟ ಅನು ಪ್ರಭಾಕರ್

ಬೆಂಗಳೂರು, ಫೆ 29 –  ಯಾವುದೇ ಪಾತ್ರಗಳಿಗೂ ಸೈ ಎನಿಸಿಕೊಂಡಿರುವ ನಟಿ ಅನು ಪ್ರಭಾಕರ್ ಮಗುವಾದ ನಂತರ ನಟನೆಯಿಂದ ದೂರ ಉಳಿದಿದ್ದರು.

ಈ ಮೊದಲೇ ಅಭಿನಯಿಸಿದ್ದ ‘ಅನುಕ್ತ’ ಚಿತ್ರ ಕಳೆದ ವರ್ಷ ತೆರೆಕಂಡಿತ್ತು.  ಪ್ರಸ್ತುತ ಮಗುವಿನ ಆರೈಕೆಯಲ್ಲಿ ಮಗ್ನರಾಗಿರುವ ನಟಿ, ಮತ್ತೆ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ಬರಲು ಸಜ್ಜಾಗಿದ್ದಾರೆ.

ಹೀಗಂತ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಇದಕ್ಕೆ ಟ್ವೀಟಿಗರೊಬ್ಬರು ಮಾಡಿದ್ದ ಟೀಕೆಗೆ ಸರಿಯಾಗಿ ಉತ್ತರಿಸಿದ್ದಾರೆ.

ಈಗಾಗಲೇ ಒಂದೆರಡು ಪ್ರಾಜೆಕ್ಟ್ ಸಹಿ ಮಾಡಿರುವ ಅನು ಇತ್ತೀಚಿಗಷ್ಟೆ ಫೋಟೋವೊಂದು ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದರು.

 ಆದರೆ, ಆ ಫೋಟೋಗೆ ವ್ಯಕ್ತಿಯೊಬ್ಬ ಕಾಲೆಳೆದು ಟೀಕೆ ಮಾಡಿದ್ದಾನೆ. ಅದಕ್ಕೆ ಅನು ಕೂಡ ಪ್ರತಿಕ್ರಿಯಿಸಿದ್ದು, ಖಾರವಾಗಿ ಉತ್ತರಿಸಿದ್ದಾರೆ.

 ಸೀರೆಯಲ್ಲಿ ಕಾಣಿಸಿಕೊಂಡಿದ್ದ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಅನು ಪ್ರಭಾಕರ್ ”ಮತ್ತೆ ಕ್ಯಾಮೆರಾ ಮುಂದೆ…”ಎಂದು ಕ್ಯಾಪ್ಷನ್ ಹಾಕಿ ಸ್ಮೈಲಿ ಎಮೋಜಿ ಹಾಕಿದ್ದಾರೆ. ಈ ಪೋಸ್ಟ್ ಗೆ ವ್ಯಕ್ತಿಯೊಬ್ಬ ಅಣುಕಿಸಿ ಕಾಮೆಂಟ್ ಮಾಡಿದ್ದಾರೆ.

 ‘ಮತ್ತೆ ಕ್ಯಾಮೆರಾ ಮುಂದೆ…’ ಅಂದ್ರೆ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿರುವ ಅನು ಪ್ರಭಾಕರ್ ಗೆ ವ್ಯಕ್ತಿಯೊಬ್ಬ ”ಈಗ ಸ್ವಲ್ಪ ವಯಸ್ಸಾಗಿದೆ ಬಿಡಿ ಸಾಕು” ಎಂದು ಕಾಲೆಳೆದಿದ್ದಾನೆ.

ನೀವು ನನ್ನ ಸಿನಿಮಾ ನೋಡುವುದು ಬೇಡ ಬಿಡಿ ಅಣುಕಿಸಿ ಕಾಮೆಂಟ್ ಮಾಡಿದ ವ್ಯಕ್ತಿಗೆ ಉತ್ತರಿಸಿದ ಅನು ಪ್ರಭಾಕರ್ ”ವಯಸ್ಸಾದ್ರೆ ಕೆಲಸ ನಿಲ್ಲಿಸಬೇಕಾ ಮಧು …?? ನೀವು ನನ್ನ ಸಿನಿಮಾ ನೋಡೋ ಅವಶ್ಯಕತೆ ಇಲ್ಲ ಬಿಡಿ . . .ಕಲಾವಿದರಾಗಿ ನಮ್ಮನ್ನ ಇಷ್ಟಪಡೋರು ನೋಡ್ತಾರೆ” ಎಂದು ತಿರುಗೇಟು ನೀಡಿದ್ದಾರೆ

Leave a Comment