ವಚನ ಸಾಹಿತ್ಯದಲ್ಲಿ ಪ್ರತಿಪಾದಿತ ಮೌಲ್ಯಗಳು ಸಾರ್ವಕಾಲಿಕ

ಹುಬ್ಬಳ್ಳಿ,ಸೆ8 : ಬಸವಾದಿ ಶರಣರು ಅರಿವು, ಅನುಭವ, ಅನುಭಾವದಿಂದ ಬರೆದ ವಚನಗಳು ಜೀವನಪಥ ತೋರಿಸುವ ದೀಪಸ್ತಂಭಗಳು. ಇಂದಿನ ಸಂಘರ್ಷಮಯ ಜಗತ್ತಿಗೆ ಸಾಮರಸ್ಯ, ಬಂಧುತ್ವ-ಭಾವೈಕ್ಯತೆಯಿಂದ ಬದುಕುವ ಮಾರ್ಗ ತೋರಿಸಬಲ್ಲ ಮಾನವೀಯ ವಿಶ್ವ ಮೌಲ್ಯಗಳನ್ನು ಪ್ರತಿಪಾದಿಸಿ, ಬರೆದ ವಚನಗಳು ಬಹಳ ಪ್ರಸ್ತುತವಾಗಿ “ಒಲಿ, ಒಲಿಸು, ಕೂಡಿನಲಿ ಸ್ವಾವಲಂಬಿಯಾಗು. ದಾಸೋಹ ಮಾಡು, ಕಾಯಕ ಮಾಡು, ಅನುಭಾವಿಯಾಗು, ಬೇಧಭಾವ ಸಲ್ಲದು” ಎಂದು ಸಾರುವ ವಚನ ಸಾಹಿತ್ಯವು ವಿಶ್ವ ಮಾನವೀಯ ಮೌಲ್ಯಗಳಿಂದ ತುಂಬಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಜಿ. ವಿ. ಚಿಕ್ಕಮಠ ಅವರು ಹುಬ್ಬಳ್ಳಿಯ ಶರಣ ಸಾಹಿತ್ಯ ಪರಿಷತ್ತು ಗೋಪನಕೊಪ್ಪದ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಚನ ದಿನಾಚರಣೆಯ ಅಂಗವಾಗಿ ನಡೆದ ವಿರುಪಾಕ್ಷಪ್ಪ ಶಿ. ಬಸವನಾಳ ಮತ್ತು ಮುರಿಗೆಮ್ಮ ಬಸವನಾಳ ದತ್ತಿ ಉಪನ್ಯಾಸ ನೀಡುತ್ತ ತಿಳಿಸಿದರು.
ಡಾ. ಚಂದ್ರಶೇಖರ ಯಾವಗಲ್ಲಮಠ ಅವರು ವಚನ ಸಾಹಿತ್ಯದ ಸಂಗ್ರಹ, ಸಂಪಾದನೆ, ಪರಿಷ್ಕರಣ, ಪ್ರಚಾರದ ಇತಿಹಾಸವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಏರ್ಪಡಿಸಿದ್ದ ಹುಬ್ಬಳ್ಳಿ ತಾಲೂಕು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವಚನ ಗಾಯನ ಸ್ಪರ್ಧೆಯಲ್ಲಿ ವಿವಿಧ ಪ್ರೌಢಶಾಲೆಗಳಿಂದ 25 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದರಲ್ಲಿ ಪ್ರಥಮ ಸ್ಥಾನವನ್ನು ಕುಮಾರಿ ಶ್ರೀಲಕ್ಷ್ಮೀ ಆಚಾರ್ಯ, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ, ಹುಬ್ಬಳ್ಳಿ, ದ್ವಿತೀಯ ಸ್ಥಾನವನ್ನು ಕುಮಾರಿ ಭಾರ್ಗವಿ ಜೋಶಿ, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ, ಹುಬ್ಬಳ್ಳಿ. ತೃತೀಯ ಸ್ಥಾನವನ್ನು ಕುಮಾರಿ ಸೃಷ್ಠಿ ಕಡ್ಲಿಮಟ್ಟಿ,  ನಿರ್ಮಲಾ ಠಕ್ಕರ ಹೈಸ್ಕೂಲ್, ಹುಬ್ಬಳ್ಳಿ, ಸಮಾಧಾನಕರ ಬಹುಮಾನವನ್ನು ಕುಮಾರಿ ಗಂಗಾ ರಜಪೂತ, ಲೀಲಾವತಿ ನಾಡಿಗೇರ ಪ್ರೌಢಶಾಲೆ, ಕುಮಾರಿ ಸುಮನ ಯತ್ನಟ್ಟಿ ಎಸ್.ಬಿ.ಆಯ್. ಹೈಸ್ಕೂಲ್, ಹುಬ್ಬಳ್ಳಿ. ಇವರು ಪಡೆದರು. ಪ್ರೊ. ಬಸವರಾಜ ಕೆಂಧೂಳಿ, ಪ್ರೊ. ಶಿವಯೋಗಪ್ಪ ಎಮ್ಮಿ,  ಅವರಾದಿಯವರು ನಿರ್ಣಾಯಕರಾಗಿ ಆಗಮಿಸಿದ್ದರು.
ಅತಿಥಿಗಳಾಗಿ ಆಗಮಿಸಿದ್ದ  ಮಲ್ಲಿಕಾರ್ಜುನ ಸಾವಕಾರ ಅವರು ವಚನಗಳ ಮಹತ್ವ ಮತ್ತು ಪ್ರಸ್ತುತತೆ ಕುರಿತು ಮಾತನಾಡಿದರು. ದತ್ತಿ ದಾನಿಗಳಾದ ರವೀಂದ್ರ ಶಿವಲಿಂಗಪ್ಪ ಬಸವನಾಳ ಅವರು ದತ್ತಿ ಉಪನ್ಯಾಸಗಳ ಸಂಖ್ಯೆ ಹೆಚ್ಚಬೇಕು. ಹುಬ್ಬಳ್ಳಿ ಸಾಹಿತ್ಯ ಪರಿಷತ್ತು ಪ್ರತಿವರ್ಷ ಔಚಿತ್ಯಪೂರ್ಣವಾಗಿ, ವ್ಯವಸ್ಥಿತವಾಗಿ ದತ್ತಿಗಳನ್ನು ಏರ್ಪಡಿಸುತ್ತಿರುವುದನ್ನು ಪ್ರಶಂಸೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಅವರು ವಚನ ದಿನಾಚರಣೆ ದತ್ತಿ ಉಪನ್ಯಾಸ, ವಚನ ಗಾಯನ ಸ್ಪರ್ಧೆ ಏರ್ಪಡಿಸಿದ್ದು, ಒಳ್ಳೆಯ ಕೆಲಸ. ವಚನಗಳನ್ನು ಪ್ರಚಾರ ಮಾಡುವ ಅವಶ್ಯಕತೆ ಎಂದಿಗಿಂತ ಇಂದು ಹೆಚ್ಚಾಗಿದೆ ಎಚಿದು ತಿಳಿಸಿದರು.
ಗೌರವಾಧ್ಯಕ್ಷರಾದ ಪ್ರೊ. ಜಿ. ಬಿ. ವೀರಭದ್ರಯ್ಯನವರು, ಗೋಪನಕೊಪ್ಪ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ  ಸುನಂದಾ ಬಸರಗಿ ವೇದಿಕೆಯನ್ನು ಅಲಂಕರಿಸಿದ್ದರು. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಕೆ. ಎಸ್. ಕೌಜಲಗಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.  ರಮೇಶ ಅಂಗಡಿ,  ಬಸವಂತಪ್ಪ ಸಿ. ಅರಳಿ,  ಆರ್.ಎಸ್. ಗುಳೇರ,  ಸಿದ್ರಾಮಗೌಡ ಕೆ. ಮಾಲೀಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

Leave a Comment