ವಕೀಲರ ಅಹವಾಲು ಆಲಿಸಿದ ಸಂಸದ ಎಸ್‌ಪಿಎಂ

ತುಮಕೂರು, ಆ. ೧೩- ಕಳೆದ ಐದು ದಿನಗಳಿಂದ ನಗರದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಟ್ಟಡದ ಎರಡು ಮತ್ತು ಮೂರನೇ ಮಹಡಿ ನಿರ್ಮಾಣಕ್ಕೆ ಸರ್ಕಾರ ನಿಗದಿಪಡಿಸಿರುವ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ವಕೀಲರು ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಭೇಟಿ ನೀಡಿ ವಕೀಲರ ಅಹವಾಲು ಆಲಿಸಿದರು.
ಸರತಿಯಂತೆ ನಿನ್ನೆ ಉಪವಾಸ ನಿರತರಾಗಿದ್ದ ಮಹಿಳಾ ವಕೀಲರನ್ನು ಭೇಟಿಯಾದ ಸಂಸದರು, ಅವರ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ತಮ್ಮ ಸಮಸ್ಯೆಯನ್ನು ಸಂಸದರ ಮುಂದೆ ತೆರೆದಿಟ್ಟ ಷಹಜಾಬಿ ಅವರು, ವಕೀಲರ ಸಂಘಕ್ಕೆ ಈಗಾಗಲೇ ಸರ್ಕಾರದಿಂದ ಹಣ ಮಂಜೂರಾಗಿದ್ದು, ಇದರಲ್ಲಿ ಸುಮಾರು 1.67 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ನೆಲ ಮತ್ತು ಮೊದಲನೇ ಅಂತಸ್ತನ್ನು ನಿರ್ಮಿಸಲಾಗಿದೆ. ಎರಡು ಮತ್ತು ಮೂರನೇ ಮಹಡಿಯ ಕಟ್ಟಡ ನಿರ್ಮಾಣಕ್ಕೆ ತಕ್ಷಣವೇ ಹಣ ಬಿಡುಗಡೆ ಮಾಡಬೇಕೆಂಬುದು ನಮ್ಮ ಬೇಡಿಕೆ. ತುಮಕೂರು ಬಾರ್ ಅಸೋಸಿಯೇಷನ್‍ನಲ್ಲಿ ಸುಮಾರು 2500 ಜನ ವಕೀಲರು ಕೆಲಸ ಮಾಡುತ್ತಿದ್ದು, ಸುಮಾರು 150ಕ್ಕೂ ಹೆಚ್ಚು ಮಹಿಳಾ ವಕೀಲರಿದ್ದಾರೆ. ಎರಡು ಮತ್ತು ಮೂರನೇ ಅಂತಸ್ಥಿನ ಕೆಲಸ ನೆನೆಗುದಿಗೆ ಬಿದ್ದ ಕಾರಣ ಇರುವ ಕಟ್ಟಡ ಸೋರುತ್ತಿದೆ. ಆದ್ದರಿಂದ ತಕ್ಷಣ ಹಣ ಬಿಡುಗಡೆ ಮಾಡಿ ಸಹಕರಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹರಿಕುಮಾರ್ ಮಾತನಾಡಿ, ಸರ್ಕಾರ ಈಗಾಗಲೇ ವಕೀಲರ ಸಂಘದ ಕಟ್ಟಡಕ್ಕೆ ಅನುದಾನ ಮಂಜೂರು ಮಾಡಿದೆ. ಇದರಲ್ಲಿ ಒಂದಿಷ್ಟು ಹಣ ಬಿಡುಗಡೆ ಮಾಡಿ, ಉಳಿದ ಹಣಕ್ಕಾಗಿ ಕಳೆದ ಒಂದು ವರ್ಷದಿಂದ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ವಕೀಲರು ಪ್ರತಿಭಟನೆ ನಡೆಸಬೇಕಾಗಿದೆ ಎಂದರು.

ವಕೀಲರ ಮನವಿ ಆಲಿಸಿದ ನಂತರ ಮಾತನಾಡಿದ ಸಂಸದ ಎಸ್.ಪಿ.ಮುದ್ದಹನುಮೇಗೌಡ, ನಾನು ಮೂಲತಃ ವಕೀಲ. ನಂತರ ರಾಜಕಾರಣಿ. ಹಾಗಾಗಿ ವಕೀಲ ವೃತ್ತಿಯನ್ನು ಮರೆಯುವಂತಿಲ್ಲ. ವಕೀಲರು ಅದರಲ್ಲಿಯೂ ಮಹಿಳಾ ವಕೀಲರು ಮೂಲಭೂತ ಸೌಕರ್ಯಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ನಾಚಿಕೆಗೇಡಿನ ವಿಚಾರ. ಆಗಸ್ಟ್ 14 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರು ಕಾವೇರಿ ಕೊಳ್ಳದ ನೀರು ಹಂಚಿಕೆ ಕುರಿತು ಸಭೆ ನಡೆಸಲಿದ್ದು, ಆ ಸಭೆಯಲ್ಲಿ ಕಾನೂನು ಸಚಿವರು ಪಾಲ್ಗೊಳ್ಳಲಿದ್ದಾರೆ. ಅಂದಿನ ಸಭೆಯಲ್ಲಿ ನಿಮ್ಮ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸುತ್ತೇನೆ. ಅಲ್ಲದೆ ಆ. 17 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರು ನಗರಕ್ಕೆ ಆಗಮಿಸುತ್ತಿದ್ದು, ಅಂದು ನಿಮ್ಮನ್ನು ಮುಖ್ಯಮಂತ್ರಿ ಭೇಟಿ ಮಾಡಿಸಿ, ಸಮಸ್ಯೆ ಆಲಿಸಲು ಅವಕಾಶ ಕಲ್ಪಿಸಲಿದ್ದೇನೆ. ಆದ್ದರಿಂದ ಉಪವಾಸ ಸತ್ಯಾಗ್ರಹವನ್ನು ವಾಪಸ್ಸು ಪಡೆಯುವಂತೆ ಮನವಿ ಮಾಡಿದರು.

ಆದರೆ ಸಂಸದರ ಮನವಿಯನ್ನು ಗೌರವಯುತವಾಗಿ ತಿರಸ್ಕರಿಸಿದ ಪ್ರತಿಭಟನಾನಿರತ ವಕೀಲರು, ಆ.14 ರಂದು ಮುಖ್ಯಮಂತ್ರಿಗಳೊಂದಿಗೆ ಚರ್ಚೆಯ ನಂತರ ಹೊರ ಬರುವ ನಿರ್ಧಾರದ ಮೇಲೆ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲಿಯವರೆಗೆ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

Leave a Comment